ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸಭೆಯ 2025ನೇ ಸಾಲಿನ ಚುನಾವಣೆಯ ಮತ ಎಣಿಕೆ ಕಾರ್ಯ ಶನಿವಾರ ಮುಂಜಾನೆಯಿಂದ ಶುರುವಾಗಿದೆ. ಇಡೀ ದೇಶದ ಚಿತ್ತ ಈ ಫಲಿತಾಂಶದ ಮೇಲೆ ನೆಟ್ಟಿದೆ. ಹ್ಯಾಟ್ರಿಕ್ ಗೆಲುವಿನ ನರೀಕ್ಷೆಯಲ್ಲಿದ್ದ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಪಡೆಗೆ ಬಿಜೆಪಿ ಠಕ್ಕರ್ ಕೊಟ್ಟಿದೆ ಎಂದು ಹೇಳಲಾಗುತ್ತಿದೆ. ಆರಂಭ ಹಂತದ ಮುನ್ನಡೆಯಲ್ಲಿ ಬಿಜೆಪಿ ಮ್ಯಾಜಿಕ್ ನಂಬರ್ ದಾಟಿದೆ. ಆಡಳಿತರೂಢ ಆಪ್ 2ನೇ ಸ್ಥಾನದಲ್ಲಿದೆ. ಕಾಂಗ್ರೆಸ್ ಚಿಂತಾಜನಕವಾಗಿದೆ.
70 ಕ್ಷೇತ್ರಗಳಲ್ಲಿ ಬಿಜೆಪಿ 46, ಆಪ್ 23 ಹಾಗೂ ಕಾಂಗ್ರೆಸ್ ಕೇವಲ 1 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. 35 ಮ್ಯಾಜಿಕ್ ನಂಬರ್ ಆಗಿದೆ. ಇದನ್ನು ದಾಟಿಕೊಂಡು ಬಿಜೆಪಿ ಮುನ್ನುಗ್ಗುತ್ತಿದೆ. ಇದೆ ಟ್ರೆಂಡ್ ಮುಂದುವರೆದರೆ ದಶಕಗಳ ಬಳಿಕ ಬಿಜೆಪಿ ದೆಹಲಿಯಲ್ಲಿ ಗದ್ದುಗೆ ಏರಲಿದೆ. ಇನ್ನು ಸ್ವತಃ ಅರವಿಂದ್ ಕೇಜ್ರಿವಾಲ್, ಮನೀಷ್ ಸಿಸೋಡಿಯಾ, ಸತ್ಯೇಂದ್ರ ಜೈನ್ ಹಿನ್ನಡೆಯಲ್ಲಿದ್ದಾರೆ. ಸಿಎಂ ಅತಿಶಿ ಮುನ್ನಡೆಯಲ್ಲಿದ್ದಾರೆ. ಒಟ್ಟಿನಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ ದೆಹಲಿ ಚುನಾವಣೆ ಫಲಿತಾಂಶ ಇನ್ನು ಕೆಲವೇ ಗಂಟೆಗಳಲ್ಲಿ ಸ್ಪಷ್ಟವಾಗಲಿದೆ.