ಪ್ರಜಾಸ್ತ್ರ ಸುದ್ದಿ
ಮಂಗಳೂರು(Mangaloru): ಪ್ರೇಯಸಿಯನ್ನು ಹತ್ಯೆ ಮಾಡಿದ ಪ್ರಕರಣ ಸಂಬಂಧ ಪ್ರಿಯಕರನನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿದೆ. ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ರಾಂಪೂರ ಹತ್ತಿರದ ಬೆನಕೊಟಗಿ ತಾಂಡಾದ ಸಂದೀಪ್ ರಾಥೋಡ ಅನ್ನೋ ಯುವಕನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅಂಜನಾ ಎನ್ನುವ ಪ್ರೇಯಸಿಯನ್ನು ಅತ್ತಾವರದ ಬಾಡಿಗೆ ರೂಮಿಗೆ ಜೂನ್ 7, 2019ರಂದು ಕರೆಸಿಕೊಂಡು ಹತ್ಯೆ ಮಾಡಿದ್ದ. ಈ ಪ್ರಕರಣದ ಪೊಲೀಸ್ ತನಿಖೆ ನಡೆದು ಹತ್ಯೆ ಮಾಡಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ರವೀಂದ್ರ ಎಂ.ಜೋಶಿ ಅವರು ತೀರ್ಪಿನಲ್ಲಿ ಶಿಕ್ಷೆ ಪ್ರಕಟಿಸಿದ್ದಾರೆ.
ಘಟನೆ ಹಿನ್ನಲೆ ಏನು?
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನವನಾದ ಸಂದೀಪ್ ರಾಥೋಡಗೆ 2018ರಲ್ಲಿ ಫೇಸ್ ಬುಕ್ ಮೂಲಕ ಚಿಕ್ಕಮಗಳೂರಿನ ತರಕೇರಿಯ ಅಂಜನಾ ಎನ್ನುವ ಯುವತಿಯ ಪರಿಚಯವಾಗಿದೆ. ಆಗ ಯುವತಿ ಉಜರೆಯ ವಸತಿ ನಿಲಯದಲ್ಲಿದ್ದುಕೊಂಡು ಎಂಎಸ್ಸಿ ಓದುತ್ತಿದ್ದಳು. ಇತ್ತ ಪಿಎಸ್ಐ ಪರೀಕ್ಷೆ ತರಬೇತಿಗಾಗಿ ಸಂದೀಪ್ ಮಂಗಳೂರಿನ ಹಂಪನಕಟ್ಟೆಯ ಕೋಚಿಂಗ್ ಸೆಂಟರ್ ವೊಂದರಲ್ಲಿ ಅಡ್ಮಿಷನ್ ಮಾಡಿದ್ದ. ಹೀಗಾಗಿ ಅತ್ತಾವರದ ಹತ್ತಿರ ಬಾಡಿಗೆ ರೂಮ್ ಮಾಡಿದ್ದ.
ಇತ ಮಾಡಿದ್ದ ಬಾಡಿಗೆ ರೂಮಿಗೆ ಅಂಜನಾ ಬಂದು ಹೋಗುತ್ತಿದ್ದಳು. ಈ ವೇಳೆ ಗಂಡ, ಹೆಂಡತಿಯೆಂದು ಹೇಳಿಕೊಂಡಿದ್ದ. ಮುಂದೆ ಯುವತಿ ಊರಿಗೆ ಹೋಗಿದ್ದ ಸಂದರ್ಭದಲ್ಲಿ ಕುಟುಂಬಸ್ಥರು ನಿರ್ಧರಿಸಿ, ಹುಡುಗನನ್ನು ತೋರಿಸಿ ಮಾತುಕತೆ ಆಡಿದ್ದಾರೆ. ಈ ವಿಚಾರವನ್ನು ಸಂದೀಪಗೆ ಹೇಳಿ ನನ್ನನ್ನು ಮರೆತುಬಿಡು ಎಂದಿದ್ದಾಳೆ. ಇದರಿಂದ ಅಸಮಾಧಾನಗೊಂಡ ಆತ, ಆಕೆಯನ್ನು ನಂಬಿಸಿ ಜೂನ್ 7, 2019ರಲ್ಲಿ ರೂಮಿಗೆ ಕರೆಸಿಕೊಂಡಿದ್ದಾನೆ. ನಂತರ ಆಕೆಯನ್ನು ಹತ್ಯೆ ಮಾಡಿ, ಫೋಟೋ, ವಿಡಿಯೋ ಮಾಡಿಕೊಂಡಿದ್ದಾನೆ. ಇದಾದ ಬಳಿಕ ಆಕೆಯ ಮೊಬೈಲ್, ಎಟಿಎಂ ತೆಗೆದುಕೊಂಡು ಅಲ್ಲಿಂದ ಹೊರಟು ಹೋಗಿದ್ದಾನೆ. ಆಕೆಯ ಎಟಿಎಂನಿಂದಲೇ ಬಿಜೈನನಲ್ಲಿ 15 ಸಾವಿರ ರೂಪಾಯಿ ಹಣ ಡ್ರಾ ಮಾಡಿದ್ದಾನೆ. ಅಲ್ಲಿಂದ ಸೀದಾ ಸಿಂದಗಿಗೆ ಬಂದು ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾನೆ.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸಿಂದಗಿಗೆ ಬಂದು ಆತನನ್ನು ಬಂಧಿಸಿದ್ದಾರೆ. ಅವನಿಂದ ಮೊಬೈಲ್, ಆಕೆಯ ಮೊಬೈಲ್, ಎಟಿಎಂ, 12,300 ರೂಪಾಯಿ ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ 45 ಸಾಕ್ಷಿದಾರರನ್ನು ವಿಚಾರಸಲಾಗಿದೆ. 100 ದಾಖಲೆಗಳನ್ನು ಗುರುತಿಸಲಾಗಿದೆ ಅಂತಾ ಸರ್ಕಾರಿ ವಕೀಲರಾದ ಜುಡಿತ್ ಒಲ್ಗಾ ಮಾರ್ಗರೇಟ್ ಕ್ರಾಸ್ತಾ ತಿಳಿಸಿದ್ದಾರೆ. ಮಂಗಳೂರು ನಗರ ದಕ್ಷಿಣ ಠಾಣೆಯಲ್ಲಿ ಆಗ ಪಿಎಸ್ಐ ಆಗಿದ್ದ ರಾಜೇಂದ್ರ.ಬಿ ಹಾಗೂ ಇನ್ ಸೆಪೆಕ್ಟರ್ ಎಂ.ಕುಮಾರ್ ಆರಾಧ್ಯ ಅವರು ತನಿಖೆ ನಡೆಸಿದ್ದರು. ಮುಂದೆ ಇನ್ಸ್ ಪೆಕ್ಟರ್ ಲೋಕೇಶ್ ಎ.ಸಿ ಅವರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಎಲ್ಲ ರೀತಿಯ ಸಾಕ್ಷಾಧರಗಳನ್ನು ಪರಿಶೀಲಿಸಿದ ಕೋರ್ಟ್ ಸಂದೀಪ್ ರಾಠೋಡ ಅಪರಾಧಿ ಎಂದು ಜೀವಾವಧಿ ಶಿಕ್ಷೆ ವಿಧಿಸಿದೆ.