ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಕಳೆದ ಸೆಪ್ಟೆಂಬರ್ 29ರಂದು ಕಾಣೆಯಾಗಿದ್ದ ಮೂರು ವರ್ಷದ ಬಾಲಕಿಯ ಮೃತದೇಹ ಗುರುವಾರ ಪತ್ತೆಯಾಗಿದೆ. ಇಲಕಲ್ ತಾಲೂಕಿನ ಸೋಮಲಾಪುರ ಗ್ರಾಮದ ಮಹಾಂತೇಶ ಕಂತಿಮಠ ಎಂಬುವರ ಮಗಳು ಅಮೃತಾ ಮೃತ ಬಾಲಕಿಯಾಗಿದ್ದಾಳೆ. ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ದಸರಾ ಹಬ್ಬದ ಹಿನ್ನಲೆಯಲ್ಲಿ ಬಾಲಕಿ ಅಜ್ಜಿಯ ಮನೆಗೆ ಬಂದಿದ್ದಳು. ಅಮೃತಾಗೆ ಪಾರಿವಾಳ ಎಂದರು ಬಹಳ ಪ್ರೀತಿ. ಹೀಗಾಗಿ ಅವುಗಳಿಗೆ ಕಾಳು ಹಾಕಲು ಮಾಳಿಗೆಯ ಮೇಲೆ ಹೋಗುತ್ತಿದ್ದಳು. ಹೀಗೆ ಕಾಳು ಹಾಕಲು ಹೋದಾಗ ಆಯ ತಪ್ಪಿ ಬಿದ್ದು ಮೃತಪಟ್ಟಿದ್ದಾಳೆ ಎಂದು ಹೇಳಲಾಗುತ್ತಿದೆ. ಅಜ್ಜಿಯ ಮನೆಯ ಹಿಂಭಾಗದಲ್ಲಿ ಬಸಪ್ಪ ಮಾಮನಿ ಎಂಬುವರ ಮನೆ ಪಾಳು ಬಿದ್ದಿದೆ. ಅಲ್ಲಿ ಬಾಲಕಿಯ ಮೃತದೇಹ ಅಕ್ಟೋಬರ್ 2 ಗುರುವಾರ ಪತ್ತೆಯಾಗಿದೆ.
ಬಾಲಕಿ ತಂದೆ ಮಹಾಂತೇಶ ಈ ಬಗ್ಗೆ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಆದರೂ ಸಂಶಯವಿದ್ದು, ಸಾವಿನ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.