ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಎರಡು ದಿನ ರಜೆ ಮೇಲೆ ಹೋಗಿ ಬಂದ ಕಾನ್ಸ್ ಟೇಬಲ್ ವೊಬ್ಬರ ಡ್ಯೂಟಿ ಬದಲಾಯಿಸಿದ್ದಕ್ಕೆ ಆತ್ಮಹತ್ಯೆ ನಾಟಕ ಮಾಡಿದ್ದು, ಇದರಿಂದ ಪಿಎಸ್ಐಗೆ ಲೋ ಬಿಪಿಯಾಗಿ ಆಸ್ಪತ್ರೆ ಸೇರಿದ ಘಟನೆ ಉದ್ಯಮಭಾಗ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಪೇದೆ ಮುದಕಪ್ಪ ಉದಗಟ್ಟೆ ಠಾಣೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಂತೆ ನಾಟಕ ಮಾಡಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಪರೀಕ್ಷಿಸಿ ಯಾವುದೇ ವಿಷ ಸೇವಿಸಿಲ್ಲ ಎಂದು ಹೇಳಿದ್ದಾರೆ. ಮೇಲಾಧಿಕಾರಿಗಳು ಮುದಕಪ್ಪನಿಗೆ ಬುದ್ದಿವಾದ ಹೇಳಿದ್ದಾರೆ.
ಇತ್ತ ಈ ಘಟನೆಯಿಂದ ಆತಂಕಕ್ಕೆ ಒಳಗಾದ ಪಿಎಸ್ಐ ಡಿ.ಕೆ ಪಾಟೀಲ ಅವರಿಗೆ ಲೋ ಬಿಪಿಯಾಗಿದೆ. ಅವರನ್ನು ಯಳ್ಳೂರು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ತಿಳಿದು ಠಾಣೆಗೆ ಎಸಿಪಿ ಭೇಟಿ ನೀಡಿ ಏನೆಲ್ಲ ನಡೆದಿದೆ ಎನ್ನುವುದರ ಕುರಿತು ಮಾಹಿತಿ ಪಡೆದಿದ್ದಾರೆ. ಈ ಕುರಿತು ಮೇಲಾಧಿಕಾರಿಗಳಿಗೆ ತಿಳಿಸಲಾಗಿದೆಯಂತೆ.