ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಪಟ್ಟಣದಲ್ಲಿ ಖಬರಸ್ಥಾನ್ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಬಣಗಳ ನಡುವಿನ ಗೊಂದಲಕ್ಕೆ ಸಂಬಂಧಿಸಿದಂತೆ ಎಲ್ಲದಕ್ಕೂ ತೆರೆ ಎಳೆಯಲು ಶಾಸಕ ಅಶೋಕ ಮನಗೂಳಿಯವರು ಮುಂದಾಗಿದ್ದು, 5 ಎಕರೆದಲ್ಲಿ ಖಬರಸ್ಥಾನ್ ಹಾಗೂ ಉಳಿದ 19 ಗುಂಟೆಯಲ್ಲಿ ಯು ಆಕಾರದಲ್ಲಿ ಶೆಡ್ ನಿರ್ಮಾಣ ಮಾಡುವ ಕುರಿತು ಶಾಸಕರೊಂದಿಗೆ ಚರ್ಚಿಸಲಾಗಿದೆ ಎಂದು ಕರ್ನಾಟಕ ಮುಸ್ಲಿಂ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಂ.ಎ ಖತೀಬ್ ಹೇಳಿದರು. ಪಟ್ಟಣದಲ್ಲಿ ಬುಧವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಎರಡು ಬಣದವರನ್ನು ಕರೆಯಿಸಿ ಚರ್ಚಿಸಲಾಗುತ್ತಿದೆ. ಒಂದೊಂದು ಬಣದಿಂದ ಮೂರು ಜನರು ಸೇರಿ 6 ಜನರ ಸಮಿತಿ ರಚಿಸಲು ಶಾಸಕರು ಮುಂದಾಗಿದ್ದಾರೆ ಎಂದರು.
ನಮ್ಮ ಬಣದಿಂದ ಅಂಜುಮಾನ್ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಜಾಕ್ ದುದನಿ, ಮಹಿಬೂಬ್ ನಾಟೀಕಾರ, ಪುರಸಭೆ ಮಾಜಿ ಅಧ್ಯಕ್ಷ ಬಾಷಾಸಾಬ್ ತಾಂಬೋಳಿ ಹೆಸರುಗಳನ್ನು ಸೂಚಿಸಲಾಗಿದೆ. ಯು ಆಕಾರದಲ್ಲಿ ಶೆಡ್ ಗಳನ್ನು ನಿರ್ಮಾಣ ಮಾಡಿಕೊಳ್ಳುವುದು. ಇದು ಶೆಡ್ ಮಾಲೀಕರೆ ಮಾಡಿಕೊಳ್ಳಬೇಕು. ಸುಮಾರು ವರ್ಷಗಳಿಂದ ಅಲ್ಲಿದ್ದ ಬಡವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಕುರಿತು ಶಾಸಕರೊಂದಿಗೆ ಮೈಬೂಬ್ ಸಿಂದಗಿಕರ್, ರಹೀಂ ದುದನಿ ಹಾಗೂ ನನ್ನ ಸಮಕ್ಷಮದಲ್ಲಿ ಚರ್ಚಿಸಲಾಗಿದೆ. ಇದಕ್ಕೆ ಕೆಲವರು ಒಪ್ಪಿದ್ದು, ಕೆಲವರು ಒಪ್ಪಿಲ್ಲ. ಇದಕ್ಕೆ ಒಪ್ಪಿದರೆ ಒಳ್ಳೆಯದು ಅನ್ನೋದು ನನ್ನ ಅಭಿಪ್ರಾಯ ಎಂದರು. ಈ ವೇಳೆ ಕರ್ನಾಟಕ ಮುಲ್ಲಾ ಅಸೋಸಿಯೇಷನ್ ತಾಲೂಕಾಧ್ಯಕ್ಷ ಡಾ.ಅಬೂಬಕರ್ ಮುಲ್ಲಾ, ಸಂಘಟನಾ ಕಾರ್ಯದರ್ಶಿ ಅಬ್ದುಲ್ ಮುಲ್ಲಾ, ಅಬು ಖತೀಬ್ ಉಪಸ್ಥಿತರಿದ್ದರು.