ಪ್ರಜಾಸ್ತ್ರ ಸುದ್ದಿ
ಪ್ರಯಾಗ್ ರಾಜ್(Prayagraj): ಇಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ(Mahakumbha Mela) ಬೆಂಕಿ ಅನಾಹುತವಾಗಿದೆ. ಇದರಿಂದಾಗಿ ಸುಮಾರು 20 ರಿಂದ 25 ಟೆಂಟ್ ಗಳು ಸುಟ್ಟು ಹೋಗಿವೆ. ಮೇಳದ ಸೆಕ್ಟರ್-5ರ ಟೆಂಟ್ ವೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಈ ಅನಾಹುತವಾಗಿದೆ ಎಂದು ಹೇಳಲಾಗುತ್ತಿದೆ. ಶಾಸ್ತ್ರಿ ಸೇತುವೆ ಹಾಗೂ ರೈಲ್ವೆ ಸೇತುವೆ ನಡುವಿನ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ನಡೆಸಿದ್ದಾರೆ.
ಬೆಂಕಿ ವ್ಯಾಪಿಸುತ್ತಲ್ಲೇ ಇದೆ. ಪೊಲೀಸರು, ಎನ್ ಡಿಆರ್ ಎಫ್ ತಂಡಗಳು ಅಲ್ಲಿನ ಜನರನ್ನು ಸ್ಥಳಾಂತರಿಸುವ ಕೆಲಸ ಮಾಡುತ್ತಿವೆ. ಬೇರೆ ಬೇರೆ ಟೆಂಟ್ ಗಳಲ್ಲಿರುವ ಸಿಲಿಂಡರ್ ಗಳು ಸ್ಫೋಟಗೊಳ್ಳುತ್ತಿರುವ ಪರಿಣಾಮ ಬೆಂಕಿ ಎಲ್ಲೆಡೆ ವೇಗವಾಗಿ ವ್ಯಾಪಿಸುತ್ತಿದೆ ಎಂದು ಹೇಳಲಾಗುತ್ತಿದೆ. ಇದುವರೆಗೂ ಯಾವುದೇ ರೀತಿಯ ಸಾವು ನೋವಿನ ಕುರಿತು ಮಾಹಿತಿ ತಿಳಿದು ಬಂದಿಲ್ಲ.