ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಸ್ವಾತಂತ್ರ‍್ಯ ಯೋಧರ ತ್ಯಾಗ ಬಲಿದಾನ ಹೋರಾಟ ನಮ್ಮೆಲ್ಲರಿಗೂ ಮಾರ್ಗದರ್ಶನ ಪ್ರತಿದಿನ ಆ ಹೋರಾಟಗಾರರ ತ್ಯಾಗ ಮತ್ತು ಬಲಿದಾನವನ್ನು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆನಂದ.ಕೆ ಹೇಳಿದರು. ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಮಹಾನಗರಪಾಲಿಕೆ ಭಾರತೀಯ ಸೇವಾದಳ, ಭಾರತೀಯ ಸ್ಕೌಟ್ಸ್ ಹಾಗೂ ಗೈಡ್ಸ್ ಇವರ ಸಹಯೋಗದಲ್ಲಿ ಮಹಾತ್ಮ ಗಾಂಧಿ ಹುತಾತ್ಮರಾದ ದಿನದ ಹಿನ್ನಲೆಯಲ್ಲಿ ನಗರದ ಹುತಾತ್ಮರ (ಮೀನಾಕ್ಷಿ ಚೌಕ್) ವೃತ್ತದಲ್ಲಿರುವ ಸ್ಮಾರಕಕ್ಕೆ ಹಾಗೂ ಮಹಾತ್ಮ ಗಾಂಧಿಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದವರ ಪಾತ್ರ ಮತ್ತು ರಾಷ್ಟ್ರೀಯ ಐಕ್ಯತೆಯ ಮೂಲ ಉದ್ಧೇಶಗಳ ಕುರಿತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡು ಗೌರವ ಸಲ್ಲಿಸಲಾಗುತ್ತಿದೆ. ರಾಷ್ಟ್ರಪಿತ ಮಹತ್ಮಾ ಗಾಂಧಿ ಅವರು ತಮ್ಮ ಸತ್ಯ-ಅಹಿಂಸಾ ಮಾರ್ಗದಿಂದ ದೇಶದ ಸ್ವಾತಂತ್ರ‍್ಯಕ್ಕಾಗಿ ಅನೇಕ ಸತ್ಯಾಗ್ರಹ, ಉಪವಾಸ ಕೈಗೊಂಡರು. ಮಹಾತ್ಮಾ ಗಾಂಧಿಜಿವರ ವಿಚಾರಧಾರೆಗಳು ನಮ್ಮ ಮೇಲೆ ಪ್ರಭಾವ ಬೀರಿ ಅವರ ವಿಚಾರಧಾರೆಗಳನ್ನು ತಿಳಿಯಬೇಕು ಎಂದರು.
ಬಾಲಕೀಯರ ಪದವಿ ಪೂರ್ವ ಕಾಲೇಜಿನ ಆರ್.ಸಿ ಹಿರೇಮಠ ಅವರು ಉಪನ್ಯಾಸ ನೀಡಿದರು. ನಂತರ ಹುತಾತ್ಮರ ಚೌಕದಿಂದ ಮಹಾತ್ಮ ಗಾಂಧಿ ಚೌಕಿಗೆ ತೆರಳಿ ಮಹಾತ್ಮಾ ಗಾಂಧಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ವಿದ್ಯಾರ್ಥಿನಿಯರಾದ ತನ್ವಿ ಹಾಗೂ ಈರಮ್ಮ ಮಾತನಾಡಿದರು. ಈ ವೇಳೆ ಮೇಯರ್ ಮಡಿವಾಳಪ್ಪ ಕರಡಿ, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಪ್ರಕಾಶ ವಡ್ಡರ, ಪಾಲಿಕೆಯ ಆಯುಕ್ತ ವಿಜಯ ಮೆಕ್ಕಳಕಿ, ವಿಜಯಪುರ ತಹಶೀಲ್ದಾರ್ ಪ್ರಶಾಂತ ಚನಗೊಂಡ, ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ್ ಸಲಿಂ ಬಿಜಾಪುರ ಸೇರಿದಂತೆ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.




