ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಚೇರಿ ನವೀಕರಣ(Office Renovation) ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿ ಕಾರಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದಿರುವ ಅವರು, ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಎನ್ನುವಂತೆ ಬರೋಬ್ಬರಿ 2.5 ಕೋಟಿ ರೂಪಾಯಿ ವೆಚ್ಚದಲ್ಲಿ ಸಿಎಂ ಸಿದ್ದರಾಮಯ್ಯನವರ ಕಚೇರಿ ನವೀಕರಣ ಮಾಡುತ್ತಿದೆ. ಮಜವಾದಿ ಕಾಂಗ್ರೆಸ್ ಸರ್ಕಾರ ಅಂತಾ ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯನವರೆ ಸ್ವತಃ ನಿಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೆ ಒಪ್ಪಿಕೊಂಡಿರುವಂತೆ ರಸ್ತೆಗುಂಡಿಗೆ ಒಂದು ಬುಟ್ಟಿ ಮಣ್ಣು ಹಾಕಲೂ ತಮ್ಮ ಸರ್ಕಾರದ ಬಳಿ ದುಡ್ಡಿಲ್ಲ. ಡಿಸಿಎಂ ಡಿ.ಕೆ ಶಿವಕುಮಾರ ಅವರ ಪ್ರಕಾರ ಗ್ಯಾರೆಂಟಿಗಳಿಂದ ಕಳೆದ ವರ್ಷ ಪೂರ್ತಿ ಅಭಿವೃದ್ಧಿಗೆ ದುಡ್ಡಿರಲಿಲ್ಲ. ರಾಜ್ಯದ ಜನತೆಯ ಮೇಲೆ ಒಟ್ಟಿ 1.05 ಲಕ್ಷ ಕೋಟಿ ರೂಪಾಯಿ ಸಾಲವಿದೆ. ಪರಿಸ್ಥಿತಿ ಹೀಗಿರುವಾಗ ತಮ್ಮ ಕಚೇರಿ ನವೀಕರಣಕ್ಕೆ 3 ಕೋಟಿ ರೂಪಾಯಿ ವೆಚ್ಚ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಕಳೆದ ವರ್ಷವಷ್ಟೇ ತಮ್ಮ ಸರ್ಕಾರಿ ನಿವಾಸ ಕಾವೇರಿ(Kaveri) ನವೀಕರಣಗೊಂಡಿದೆ. ಪೀಠೋಪಕರಣಗಳನ್ನು ಖರೀದಿ ಮಾಡಲಾಗಿದೆ. ಇದಕ್ಕೆ 3 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಈಗ ತಮ್ಮ ಕಚೇರಿ ನವೀಕರಣಕ್ಕೆ ಮತ್ತೊಮ್ಮೆ 3 ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದೀರಲ್ಲ ತಮ್ಮ ಆತ್ಮಸಾಕ್ಷಿ ಇದಕ್ಕೆ ಒಪ್ಪುತ್ತದೆಯೇ? ನಾನು ಸಮಾಜವಾದಿ, ಬಡವರ ಪರ ಎಂದು ಹೇಳಿಕೊಂಡು ತಮ್ಮ ಬೆನ್ನು ತಾವೇ ತಟ್ಟಿಕೊಂಡರೆ ಸಾಲದು. ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ಆ ಹಣವನ್ನು ಬಡವರಿಗಾಗಿ ಉಪಯೋಗಿಸಿ ನುಡಿದಂತೆ ನಡೆಯಿರಿ ಎಂದು ಆರ್.ಅಶೋಕ್ ಬರೆದಿದ್ದಾರೆ.