ಪ್ರಜಾಸ್ತ್ರ ಸುದ್ದಿ
ಮಾಗಡಿ(Magadi): ನಾಡ ಬಂದೂಕಿನಿಂದ ಆಕಸ್ಮಿಕವಾಗಿ ಹಾರಿದ ಗುಂಡು ವ್ಯಕ್ತಿಗೆ ತಗುಲಿ ಮೃತಪಟ್ಟ ಘಟನೆ ಶುಕ್ರವಾರ ಮುಂಜಾನೆ ತಾಲೂಕಿನ ಕೆಬ್ಬೆಪಾಳ್ಯದಲ್ಲಿ ನಡೆದಿದೆ. ಪಾಂಡುರಂಗ(35) ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಕಾಡುಪ್ರಾಣಿ ಬೇಟೆಗೆ ಪಾಂಡುರಂಗ, ಆತನ ತಮ್ಮ ಹಾಗೂ ಸ್ನೇಹಿತ ಕಿರಣ ಹೋಗಿದ್ದರು. ಈ ವೇಳೆ ದುರಂತ ನಡೆದಿದೆ.
ಇಬ್ಬರು ಒಂದೊಂದು ಕಡೆ ನಿಂತು ಪ್ರಾಣಿ ಬರುವುದನ್ನು ನೋಡುತ್ತಿದ್ದರು. ಕಾಡುಹಂದಿ ಪಾಂಡುರಂಗನತ್ತ ನುಗ್ಗಿದೆ. ಆಗ ಆತ ಬಂದೂಕು ಉಲ್ಟಾ ಮಾಡಿ ಹೊಡೆಯಲು ಹೋಗಿದ್ದು, ಅದು ತಪ್ಪಿಸಿಕೊಂಡಿದೆ. ಆಗ ನೆಲಕ್ಕೆ ಬಡೆದ ಬಂದೂಕಿನಿಂದ ಗುಂಡು ಹಾರಿ ಪಾಂಡುರಂಗನ ತೊಡೆಗೆ ತಗುಲಿದೆ. ಆಗ ತಮ್ಮ ಹಾಗೂ ಸ್ನೇಹಿತ ಮನೆಯವರಿಗೆ ತಿಳಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ. ಇವರು ಅಕ್ರಮವಾಗಿ ಬಂದೂಕು ಹೊಂದಿದ್ದರು ಎಂದು ಹೇಳಲಾಗುತ್ತಿದೆ.




