ಪ್ರಜಾಸ್ತ್ರ ಸುದ್ದಿ
ಮಂಡ್ಯ(Mandaya): ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಹತ್ತಿರ ಶುಕ್ರವಾರ ತಡರಾತ್ರಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲಾಗಿದೆ. ಮಾರಕಾಸ್ತ್ರಗಳಿಂದ ದಾಳಿ ಮಾಡಿ ಅರುಣ್ ಎಂಬಾತನನ್ನು ಹತ್ಯೆ ಮಾಡಲಾಗಿದೆ. ಸ್ನೇಹಿತರಿಂದಲೇ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ರಾತ್ರಿ ಸುಮಾರು 9.30ರ ಸುಮಾರಿನಲ್ಲಿ ಅರುಣ್ ಹಾಗೂ ಸ್ನೇಹಿತರು ಎಂ.ಟಿ.ಆರ್ ಬಾರ್ ನಲ್ಲಿ ಮದ್ಯೆ ಸೇವನೆ ಮಾಡುತ್ತಿದ್ದರು. ಈ ವೇಳೆ ಹಳೆಯ ವಿಚಾರಕ್ಕೆ ಗಲಾಟೆ ಶುರುವಾಗಿದೆಯಂತೆ. ಆಗ ಬಾರ್ ನವರು ಅವರನ್ನು ಹೊರಗೆ ಕಳಿಸಿದ್ದಾರೆ. ಇದಾದ ಬಳಿಕ ಅರುಣ್ ತಮ್ಮ ಊರಾದ ವಡ್ಡರದೊಡ್ಡಿ ಗ್ರಾಮಕ್ಕೆ ಹೊರಟಿದ್ದಾನೆ. ಸ್ಕಂದ ಲೇಔಟ್ ಹತ್ತಿರ ಹೋಗುತ್ತಿದ್ದಾಗ ಏಳೆಂಟು ಜನರ ತಂಡ ಏಕಾಏಕಿ ಮಾರಕಾಸ್ತ್ರಗಳಿಂದ ಗಂಭೀರವಾಗಿ ದಾಳಿ ಮಾಡಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಅರುಣ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ವಿಚಾರ ತಿಳಿದು ಕೆಸ್ತೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶವವನ್ನು ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.