ಪ್ರಜಾಸ್ತ್ರ ಸುದ್ದಿ
ಮಂಡ್ಯ(Mandaya): ಬಸ್ ಹಾಗೂ ಕಾರು ನಡುವೆ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಮೃತಪಟ್ಟ ಘಟನೆ ತೊಬಿನಕೆರೆ ಗ್ರಾಮದ ಹತ್ತಿರದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಗುರುವಾರ ನಡೆದಿದೆ. ಐರಾವತ್ ಬಸ್ ಹಾಗೂ ಕಾರ್ ಮಧ್ಯ ಅಪಘಾತವಾಗಿದ್ದು, ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. ದುರಂತವೆಂದರೆ ಇವರು ಅಂತ್ಯಕ್ರಿಯೆಗೆ ಹೊರಟಿದ್ದರು.
ಬೆಂಗಳೂರಿನ ವಿದ್ಯುತ್ ಗುತ್ತಿಗೆದಾರ ಸತ್ಯಾನಂದ ರಾಜೇ ಅರಸ್(59), ಪತ್ನಿ ನಿಶ್ಚಿತಾ ಅರಸ್(51), ಸಹೋದರ ಚಂದ್ರಶೇಖರ್ ರಾಜೇ ಅರಸ್(62) ಹಾಗೂ ಇವರ ಪತ್ನಿ ಸುವೇದಿನಿ ರಾಣಿ(56) ಮೃತ ದುರ್ದೈವಿಗಳು. ಹೆದ್ದಾರಿಯಿಂದ ಕಾರನ್ನು ಸರ್ವಿಸ್ ರಸ್ತೆಗೆ ತೆಗೆದುಕೊಳ್ಳುವಾಗ ಗೊಂದಲವಾಗಿ ವಾಪಸ್ ಹೆದ್ದಾರಿ ಕಡೆ ಕಾರು ತಿರುಗಿಸಿದಾಗ ಹಿಂಬದಿಯಿಂದ ಬಂದ ಐರಾವತ ಬಸ್ ಡಿಕ್ಕಿ ಹೊಡೆದಿದೆ.
ಸತ್ಯಾನಂದ ಸೋದರಮಾವ ಎನ್.ರಾಜೇ ಅರಸ್ ಅವರ ಅಂತ್ಯಕ್ರಿಯೆಗೆ ಮೈಸೂರು ಜಿಲ್ಲೆ ಪರಿಯಾಪಟ್ಟಣ ತಾಲೂಕಿನ ಸೀಗೂರು ಗ್ರಾಮಕ್ಕೆ ಬೆಂಗಳೂರಿನಿಂದ ಹೊರಟಿದ್ದರು. ವಿಮ್ಸ್ ಆಸ್ಪತ್ರೆಗೆ ಮೃತದೇಹಗಳನ್ನು ಸಾಗಿಸಲಾಗಿದೆ. ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.