ಪ್ರಜಾಸ್ತ್ರ ಸುದ್ದಿ
ಧಾರವಾಡ(Dharwad): ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ. ನಗರದ ಶ್ರೀನಗರ ವೃತ್ತದ ಬಳಿ ಜಮಾಯಿಸಿರುವ ಅಪಾರ ಸಂಖ್ಯೆಯ ಉದ್ಯೋಗ ಆಂಕಾಕ್ಷಿಗಳು ಸರ್ಕಾರದ ವಿರುದ್ಧ ಧಿಕ್ಕಾರ ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಖಲಿ ಕರ್ನಾಟಕ ವಿದ್ಯಾರ್ಥಿಗಳ ಸಂಘಟನೆ ಹಾಗೂ ಬಿಜೆಪಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಶ್ರೀನಗರ, ಸಪ್ತಾರಬಾವಿ ಸೇರಿ ಸುತ್ತಲಿನ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತಿ ಮಾಡಲಾಗಿದೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸ್ಥಳದಲ್ಲಿಯೇ ಇದ್ದಾರೆ.
ಕೈಯಲ್ಲಿ ಪೋಸ್ಟರ್ ಗಳನ್ನು ಹಿಡಿದುಕೊಂಡು ನೇಮಕಾತಿ ವಿಳಂಬ ಆಗಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದೆ. ಸರ್ಕಾರದ ವಿರುದ್ಧ, ಸಚಿವರ ವಿರುದ್ಧ ಧಿಕ್ಕಾರ ಕೂಗುತ್ತಿದ್ದು, ನ್ಯಾಯ ಬೇಕು ಎಂದು ಆಗ್ರಹಿಸಿದ್ದಾರೆ.




