ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಸಾಕಷ್ಟು ಹೋರಾಟದ ಫಲವಾಗಿ ತಳವಾರ ಸಮಾಜಕ್ಕೆ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡಲಾಗುತ್ತಿದೆ. ಆದರೆ, ಬೇರೆ ಸಮಾಜದವರು ನಮಗೆ ಅನ್ಯಾಯ ಮಾಡುವುದಾಗಲಿ, ಅವರಿಗೆ ಲಾಭ ಮಾಡಿಕೊಳ್ಳುವುದಾಗಲಿ ಎನ್ನುವ ಉದ್ದೇಶದಿಂದ ಇದನ್ನು ತಡೆಯುವ ಪ್ರಯತ್ನ ನಡೆಸಿರುವುದು ನಮ್ಮ ಗಮನಕ್ಕೆ ಬಂದಿದೆ. ಇದನ್ನು ಖಂಡಿಸಿ ಅಕ್ಟೋಬರ್ 14ರಂದು ವಿಜಯಪುರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಕಾಂಗ್ರೆಸ್ ಮಾಜಿ ಶಾಸಕ ಶರಣಪ್ಪ ಸುಣಗಾರ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ನಮ್ಮ ಸಮಾಜ ಹಿಂದುಳಿದಿದೆ. ಎಸ್ಟಿ ಪ್ರಮಾಣಪತ್ರದಿಂದ ನಮ್ಮ ಮಕ್ಕಳಿಗೆ ಆಗಿರುವ ಅನುಕೂಲವನ್ನು ತಡೆಯುವ ಸಲುವಾಗಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುವ ಕೆಲಸ ನಡೆದಿದೆ. ಪ್ರಮಾಣಪತ್ರ ವಿಚಾರದಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎನ್ನುವ ವಿಚಾರ ಹೈಕೋರ್ಟ್ ನಲ್ಲಿ ನಡೆಯುತ್ತಿದೆ. ಇದನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಗುವುದು. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಂಧುಗಳು ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.