ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಅಧಿವೇಶನ, ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಅವರಿಂದ ಒಂದಲ್ಲ ಒಂದು ಕಿರಿಕ್ ಇದ್ದೇ ಇರುತ್ತೆ. ಅದರಂತೆ ಇಂದು ಸಹ ಪ್ರತಿಭಟನೆ ನಡೆಸಿದರು. ಸಂಭಾಜಿ ವೃತ್ತದ ಹತ್ತಿರ ಮಹಾಮೇಳಾವ್ ನಡೆಸಲು ಎಂಇಎಸ್ ಕಾರ್ಯಕರ್ತರು ಜಮಾಯಿಸಿದ್ದರು. ಈ ವೇಳೆ ಪೊಲೀಸರು ಇವರನ್ನು ವಶಕ್ಕೆ ಪಡೆದರು. ಇದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಈ ಮೊದಲು ಎಂಇಎಸ್ ಕಚೇರಿಯಲ್ಲಿ ಮುಖಂಡರಾದ ಆರ್.ಎಂ ಪಾಟೀಲ, ಮನೋಹರ್ ಕಿಣೇಕರ್, ಪ್ರಕಾಶ್ ಮರ್ಗಾಳೆ, ಪ್ರಕಾಶ್ ಶಿರೋಲಕರ್ ಸೇರಿ ಕೆಲ ಮುಖಂಡರು ವಶಕ್ಕೆ ಪಡೆದರು. ಸಂಭಾಜಿ ವೃತ್ತ ಹತ್ತಿರ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಎಂಇಎಸ್ ಪ್ರತಿಭಟನೆ ಬಗ್ಗೆ ಮೊದಲೇ ಮಾಹಿತಿ ಇದ್ದ ಕಾರಣ ಬೆಳಗಾವಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಆದರೂ ಪ್ರತಿಭಟನೆಗೆ ಮುಂದಾದಾಗ ವಶಕ್ಕೆ ಪಡೆಯಲಾಗಿದೆ.
ಕರ್ನಾಟಕದಲ್ಲಿದ್ದುಕೊಂಡು ಇಲ್ಲಿ ಅನ್ನ, ನೀರು ಸೇರಿ ಪ್ರತಿಯೊಂದು ಸವಲತ್ತು ಪಡೆಯುತ್ತಿದ್ದಾರೆ. ಬೆಳಗಾವಿ, ಬೀದರ, ಬಾಲ್ಕಿ, ನಿಪ್ಪಾಣಿ, ಖಾನಾಪುರ, ಕಾರವಾರ ಸಂಯುಕ್ತ ಮಹಾರಾಷ್ಟ್ರ ಝಾಲಚ್ ಪಾಹಿಜೀ ಎಂದು ನಾಡವಿರೋಧಿ ಘೋಷಣೆ ಕೂಗಿದರು. ನಗರದ ವಿವಿಧ ಮಾರ್ಗಗಳಲ್ಲಿ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ. ಸಂಭಾಜಿ ವೃತ್ತಕ್ಕೆ ಬರುವವರನ್ನು ವಶಕ್ಕೆ ಪಡೆಯಲಾಗುತ್ತಿದೆ.