ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಸಂಕ್ರಾಂತಿ ಹಬ್ಬದ ದಿನವೇ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಇಂದು(ಭಾನುವಾರ) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು. ಇಲ್ಲಿನ ವಿಜಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ 13 ದಿನಗಳಿಂದ ಚಿಕಿತ್ಸೆ ನೀಡಲಾಗಿದ್ದು, ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದರಿಂದ ಮನೆಗೆ ತೆರಳಿದರು.
ಈ ವೇಳೆ ಮಾತನಾಡಿದ ಅವರು, ಇದು ನನಗೆ ಪುನರ್ಜನ್ಮ ಸಿಕ್ಕಿದೆ. ನನ್ನ ರಾಜಕೀಯ ಹೋರಾಟದ ಜೀವನದಲ್ಲಿ ಇದು ನಡೆಯಬಾರದಿತ್ತು. ನನ್ನ ಆರೋಗ್ಯಕ್ಕೆ ಹಾರೈಸಿದ, ಆಸ್ಪತ್ರೆಗೆ ಬಂದು ಆರೋಗ್ಯ ವಿಚಾರಿಸಿ ಹಾರೈಸಿದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ಶಾಸಕರು, ಮಠಾಧೀಶರಿಗೆಲ್ಲ ಕೃತಜ್ಞತೆಗಳು ಎಂದರು. ಇನ್ನು ಅಪಘಾತವಾದ ಕಾರಿನಲ್ಲಿ ಹಣವಿತ್ತು ಎಂದು ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿ, ಅವರದು ಕಲ್ಲು ಹೃದಯ. ನೋವಿನಲ್ಲೂ ರಾಜಕೀಯ ಮಾಡುವವರಿಗೆ ಉತ್ತರ ಕೊಡುವುದಿಲ್ಲ ಎಂದರು. ಇಷ್ಟು ದಿನ ತಮಗೆ ಚಿಕಿತ್ಸೆ ನೀಡಿದ ಆಸ್ಪತ್ರೆಯ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಸಲ್ಲಿಸಿದರು.