Ad imageAd image

52 ಲಕ್ಷ ಕೃಷಿ ಭೂಮಿ ಮೃತ ವ್ಯಕ್ತಿಯ ಹೆಸರಿನಲ್ಲಿವೆ: ಸಚಿವ ಕೃಷ್ಣ ಭೈರೇಗೌಡ

Nagesh Talawar
52 ಲಕ್ಷ ಕೃಷಿ ಭೂಮಿ ಮೃತ ವ್ಯಕ್ತಿಯ ಹೆಸರಿನಲ್ಲಿವೆ: ಸಚಿವ ಕೃಷ್ಣ ಭೈರೇಗೌಡ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಸರ್ಕಾರದಿಂದ ಫೋಡಿ ಮುಕ್ತ ಅಭಿಯಾನವನ್ನು ಹಮ್ಮಿಕೊಂಡಿದ್ದು, ಜನರು ಬಂದು ಅರ್ಜಿ ಸಲ್ಲಿಸುವವರೆಗೆ ಕಾಯ್ದು ಕುಳಿತುಕೊಳ್ಳದೇ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಫೋಡಿ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಂದಾಯ ಖಾತೆ ಸಚಿವರಾದ ಕೃಷ್ಣ ಭೈರೇಗೌಡ ಅವರು ಸೂಚನೆ ನೀಡಿದರು. ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಫೋಡಿಗೆ ಬಾಕಿ ಇರುವ ಪ್ರಕರಣಗಳನ್ನು ಖುದ್ದಾಗಿ ಗ್ರಾಮಗಳಿಗೆ ಭೇಟಿ ನೀಡಿ ಫೋಡಿಗೆ ಬಾಕಿ ಇರುವ  ಜಮೀನುಗಳ ಪರಿಶೀಲನೆ ನಡೆಸಬೇಕು. ಈ ಕಾರ್ಯವನ್ನು ಅಭಿಯಾನದ ಮಾದರಿಯಲ್ಲಿ ಕೈಗೊಳ್ಳಬೇಕು. ಒಂದೇ ಆರ್‌ಟಿಸಿಯಲ್ಲಿ ಹಲವು ಹೆಸರು ನಮೂದಾಗಿರುವ ಆರ್‌ಟಿಸಿಯನ್ನು ಸರ್ವೇ ನಡೆಸಿ, ನಕ್ಷೆ ತಯಾರಿಸಿ ಪ್ರತ್ಯೇಕವಾಗಿ ಆಯಾ ಜಮೀನಿನ ಮಾಲೀಕರ ಹೆಸರಿಗೆ  ಆರ್‌ಟಿಸಿ ಒದಗಿಸಲು ಕ್ರಮ ವಹಿಸಬೇಕು ಎಂದು ಅವರು ಸೂಚನೆ ನೀಡಿದರು.

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಭೂ ಸುರಕ್ಷಾ ಯೋಜನೆಯಡಿ ದಾಖಲೆಗಳನ್ನು ಗಣಕೀಕರಣ ಮಾಡುವ ಮೂಲಕ ಹಳೆಯ ದಾಖಲೆಗಳನ್ನು ಅತ್ಯಂತ ಸುಲಭವಾಗಿ ಜನರಿಗೆ ಒದಗಿಸಲು ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಕಂದಾಯ ಇಲಾಖೆಯಲ್ಲಿನ ಭೂಸುರಕ್ಷಾ ಯೋಜನೆಯಡಿ ಮೂಲ ಹಳೆಯ ದಾಖಲೆಗಳ ಗಣಕೀಕರಣ  ನಡೆಯುತ್ತಿದ್ದು, ರಾಜ್ಯದಾದ್ಯಂತ ಅಂದಾಜು 20 ಕೋಟಿ ಪುಟಗಳ ದಾಖಲೆಗಳ ಗಣಕೀಕರಣ ಕಾರ್ಯ ಮಾಡಲಾಗಿದೆ.  ಇನ್ನೂ ಬಾಕಿ ಇರುವ ದಾಖಲೆಗಳ ಗಣಕೀಕರಣವನ್ನು ಈ ವರ್ಷದ ಅಂತ್ಯದೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಹಳೆಯ ದಾಖಲೆಗಳ ಗಣಕೀಕರಣ ಕಾರ್ಯಕ್ಕೆ ತ್ವರಿತ ಗತಿ ನೀಡುವಂತೆ ಅವರು ಸೂಚನೆ ನೀಡಿದರು.

ಜಮೀನಿನ ಮಾಲೀಕ ಮರಣ ಹೊಂದಿದ್ದರೂ ಸಹ ಇದುವರೆಗೆ ವಾರಸುದಾರರ ಹೆಸರಿಗೆ ಜಮೀನು ಬದಲಾವಣೆಯಾಗದೇ ಮರಣ ಹೊಂದಿದ ವ್ಯಕ್ತಿಯ ಹೆಸರಿನಲ್ಲಿಯೇ ಹಲವು ಖಾತಾಗಳಿವೆ. ರಾಜ್ಯದಲ್ಲಿಯೇ ಇಂತಹ 52 ಲಕ್ಷ ಕೃಷಿ ಭೂಮಿ ಮರಣ ಹೊಂದಿದ ವ್ಯಕ್ತಿಯ ಹೆಸರಿನಲ್ಲಿಯೇ ಉಳಿದುಕೊಂಡಿದೆ. ಜಿಲ್ಲೆಯಲ್ಲಿ ಇಂತಹ ಪ್ರಕರಣಗಳನ್ನು ಗುರುತಿಸಿ ಪೌತಿ ಖಾತೆ ಮಾಡಲು ಕ್ರಮ ವಹಿಸುವಂತೆ  ಅವರು ಸೂಚನೆ ನೀಡಿದರು. ತಾಂಡಾ ಸೇರಿದಂತೆ ದಾಖಲೆ ರಹಿತ ವಸತಿ ಪ್ರದೇಶಗಳನ್ನು ಅಧಿಕೃತ ಗ್ರಾಮಗಳನ್ನಾಗಿ ಘೋಷಣೆ ಮಾಡಲಾಗುತ್ತಿದ್ದು, ಯಾವುದೇ ನ್ಯೂನ್ಯತೆಗಳಿದ್ದಲ್ಲಿ ನಿವಾರಿಸಿಕೊಂಡು, ಕಂದಾಯ ಗ್ರಾಮಗಳನ್ನಾಗಿಸುವ ಪ್ರಕ್ರಿಯೆಯಲ್ಲಿ ಕೈಬಿಟ್ಟು ಹೋದ ಪ್ರದೇಶವನ್ನು ಕೈಗೆತ್ತಿಕೊಳ್ಳಬೇಕು. ದಾಖಲೆ ರಹಿತ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಒಂದು ಲಕ್ಷ ಕುಟುಂಬಗಳ ಮನೆಗಳಿಗೆ ಮೇ.20 ರಂದು ಹೊಸಪೇಟೆಯಲ್ಲಿ ಹಕ್ಕು ಪತ್ರ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಾಕಿ ಇರುವ ಹಕ್ಕುಪತ್ರಗಳನ್ನು ಮುಂದಿನ 6 ತಿಂಗಳಲ್ಲಿ ವಿತರಣೆ ಮಾಡುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ, ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು, ವಿವಿಧ ತಾಲೂಕಾ ತಹಶೀಲ್ದಾರರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article