Ad imageAd image

ನಗರದಲ್ಲಿ ಪ್ರವಾಹ ಆಗದಂತೆ ಶಾಶ್ವತ ಪರಿಹಾರ ಕೈಗೊಳ್ಳಿ: ಸಚಿವ ಎಂ.ಬಿ ಪಾಟೀಲ

Nagesh Talawar
ನಗರದಲ್ಲಿ ಪ್ರವಾಹ ಆಗದಂತೆ ಶಾಶ್ವತ ಪರಿಹಾರ ಕೈಗೊಳ್ಳಿ: ಸಚಿವ ಎಂ.ಬಿ ಪಾಟೀಲ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ನಗರದಲ್ಲಿ ಮಳೆಯಿಂದ ಪದೇ ಪದೇ ಪ್ರವಾಹದಂತಹ ಪರಿಸ್ಥಿತಿ ಎದುರಾಗದಂತೆ ಶಾಶ್ವತ ಪರಿಹಾರಕ್ಕಾಗಿ ಸೂಕ್ತ ಕಾಮಗಾರಿಗಳನ್ನು ಕೈಗೊಂಡು ಅನುಷ್ಠಾನಗೊಳಿಸುವಂತೆ ನಗರಾಭಿವೃದ್ದಿ ಪ್ರಾಧಿಕಾರ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರು ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸೂಚನೆ ನೀಡಿದರು.

ನಗರಾಭಿವೃದ್ದಿ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ಶನಿವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಪ್ರತಿ ಬಾರಿ ಮಳೆ ಬಂದಾಗ ನಗರದ ವಿವಿಧ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ತೊಂದರೆಯಾಗುತ್ತಿದೆ. ಚರಂಡಿ ನಿರ್ಮಾಣ ಕಾರ್ಯ ಕೈಗೊಂಡು ಎಲ್ಲಿಯೂ ಮಳೆ ನೀರು ನಿಲ್ಲದಂತೆ ಸರಾಗವಾಗಿ ಹರಿದುಹೋಗುವಂತೆ ನೋಡಿಕೊಳ್ಳಬೇಕು. ಸಾರ್ವಜನಿಕರ ಕಷ್ಟ-ಕಾರ್ಪಣ್ಯಗಳನ್ನು ಅರಿತುಕೊಂಡು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ ಸಮಸ್ಯೆ ಮರುಕಳಿಸದಂತೆ ಶಾಶ್ವತವಾಗಿ ಪರಿಹಾರ ದೊರಕಿಸಲು ಸೂಕ್ತ ಕ್ರಿಯಾಯೋಜನೆಯನ್ನು ರೂಪಿಸುವಂತೆ ಸೂಚನೆ ನೀಡಿದರು.

ಹಂಚಿನಾಳ ಕೆರೆ 9.50 ಕೋಟಿ ರೂಪಾಯಿ ಅನುದಾನದಲ್ಲಿ ವ್ಯವಸ್ಥಿತವಾಗಿ ಹಾಗೂ ಅಚ್ಚುಕಟ್ಟಾಗಿ ಕಾಮಗಾರಿ ಅನುಷ್ಠಾನಗೊಳಿಸಬೇಕು. ಕೆರೆಯ ಹೂಳು ತೆಗೆಯುವುದು ಸೇರಿದಂತೆ ಗುಣಮಟ್ಟದಿಂದ ಕೂಡಿದ ಕಾಮಗಾರಿಯನ್ನು ಕೈಗೊಳ್ಳಬೇಕು. ನಗರದಲ್ಲಿರುವ ಐತಿಹಾಸಿಕ ಬಾವಡಿಗಳನ್ನು ಸ್ವಚ್ಛಗೊಳಿಸಿ ಅಲ್ಲಿಯ ನೀರನ್ನು ಸಾರ್ವಜನಿಕರ ಗೃಹ ಬಳಕೆಗೆ ಪೂರೈಕೆ ಮಾಡಿದ್ದಲ್ಲಿ, ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಬಾವಡಿಗಳ ನೀರು ಗೃಹ ಬಳಕೆ ಉಪಯೋಗಿಸಿದಾಗ ಈ ಬಾವಡಿಗಳ ಸ್ವಚ್ಛತಾ ಯೋಜನೆಗೆ ಸಾರ್ಥಕತೆ ದೊರೆಯುತ್ತದೆ. ನಗರದ ಹೊರವಲಯದ ರಂಭಾಪುರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಇತ್ತು, ಗೃಹ ಬಳಕೆಗೆ ಬಾವಡಿಗಳ ಉಪಯೋಗ ಮಾಡುತ್ತಿರುವದರಿಂದ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುವುದಿಲ್ಲ. ಹಾಗಾಗಿ  ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸುವಂತೆ ಸೂಚನೆ ನೀಡಿದರು.

ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮಾತನಾಡಿ, ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಅಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ನಗರದಲ್ಲಿ ಚರಂಡಿ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಬೇಕು ಎಂದರು. ಸಭೆಯಲ್ಲಿ ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕನ್ನಾನ್ ಮುಶ್ರೀಫ್, ಜಿಲ್ಲಾಧಿಕಾರಿ ಡಾ.ಆನಂದ ಕೆ, ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ, ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಪ್ರಾಧಿಕಾರದ ಸದಸ್ಯರಾದ ಮಹಾದೇವ ರಾಠೋಡ, ಸಂತೋಷ ಪವಾರ, ಸಲೀಂ ಪೀರಜಾದೆ, ಕಾಶಿಬಾಯಿ ಹಡಪದ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article