ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಬರದ ನಾಡು ಎಂಬ ಹಣೆಪಟ್ಟಿ ಅಂಟಿಕೊAಡಿದ್ದ ವಿಜಯಪುರ ಜಿಲ್ಲೆಯಲ್ಲಿ ಹೆಸರಾಂತ ರಾಷ್ಟ್ರೀಯ-ಅಂತರರಾಷ್ಟ್ರೀಯ ಮಟ್ಟದ ಕಂಪನಿಗಳು ಹೂಡಿಕೆ ಮಾಡಲು ಆಸಕ್ತಿ ತೋರಿದ್ದು, ಈ ಭಾಗದಲ್ಲಿ ವಿವಿಧ ಕಾರ್ಖಾನೆ ಕಂಪನಿಗಳ ಸ್ಥಾಪನೆಯಿಂದ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯಾಗುವುದಲ್ಲದೇ, ಭವಿಷ್ಯದಲ್ಲಿ ವಿಜಯಪುರ ಜಿಲ್ಲೆಯ ಮ್ಯಾನುಫ್ಯಾಕ್ಚರ್ ಕ್ಲಸ್ಟರ್‌ವಾಗಿ ರೂಪಗೊಳ್ಳಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರು ಹೇಳಿದರು.
ಜಿಲ್ಲಾಡಳಿತದ ವತಿಯಿಂದ ಸೋಮವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ,ನಂತರ ಧ್ವಜವಂದನೆ ಸ್ವೀಕರಿಸಿ,ತೆರೆದ ವಾಹನದಲ್ಲಿ ಪೆರೇಡ್ ತಂಡಗಳ ಪರಿವೀಕ್ಷಣೆ ನಡೆಸಿ, ಗಣರಾಜ್ಯೋತ್ಸವ ಸಂದೇಶ ನೀಡಿದ ಅವರು, ಸ್ವಿಟ್ಜರ್ಲೆಂಡ್ ದೇಶದ ದಾವೋಸ್ ನಗರದಲ್ಲಿ ನಡೆದ ವಿಶ್ವ ಆರ್ಥಿಕ ಸಮಾವೇಶದಲ್ಲಿ ನಾನು ನೋಕಿಯಾ, ಟಾಟಾ ಸನ್ಸ್, ವಾಸ್ಟ್ ಸ್ಪೇಸ್ ಇನ್ನೂ ಮುಂತಾದ 50ಕ್ಕೂ ಹೆಚ್ಚು ಕಂಪನಿಗಳ ಉನ್ನತ ಮಟ್ಟದ ಪ್ರತಿನಿಧಿಗಳ ಜೊತೆ ಬಂಡವಾಳ ಹೂಡಿಕೆ ಕುರಿತು ಮಾತುಕತೆ ನಡೆಸಿದ್ದೇನೆ. ಈ ಪೈಕಿ ಆರ್.ಪಿ-ಸಂಜೀವ್ ಗೊಯೆಂಕಾ ಕಂಪನಿಯು ಮರುಬಳಕೆ ಇಂಧನ ಕ್ಷೇತ್ರದಲ್ಲಿ ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಬಂಡವಾಳ ಹೂಡಿಕೆ ಮಾಡಲಿದೆ. ಇದರಿಂದ ಜಿಲ್ಲೆಯ ಯುವಜನರಿಗೆ ಇಲ್ಲೇ ಉಜ್ವಲ ಉದ್ಯೋಗಾವಕಾಶ ಸೃಷ್ಟಿಯಾಗಲಿವೆ ಎಂದು ಅವರು ಹೇಳಿದರು.
ಕೆಲವು ತಿಂಗಳ ಹಿಂದೆ ಕೇಂದ್ರ ರಕ್ಷಣಾ ಸಚಿವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ವಿಜಯಪುರ-ಬೆಳಗಾವಿ- ಧಾರವಾಡ ಜಿಲ್ಲೆಗಳನ್ನು ಒಳಗೊಂಡ ರಕ್ಷಣಾ ಕಾರಿಡಾರ್ ಮಂಜೂರು ಮಾಡುವಂತೆ ಮನವಿ ಮಾಡಿಕೊಂಡು, ಗಮನ ಸೆಳೆಯಲಾಗಿದೆ.ಉದ್ಘಾಟನೆಗೆ ಸಜ್ಜಾಗಿರುವ ವಿಜಯಪುರ ವಿಮಾನ ನಿಲ್ದಾಣವು ಮುಂದೆ ಇದರ ಲಾಭ ಪಡೆಯಲಿದೆ. ಇದರಿಂದ ಕಿತ್ತೂರು ಕರ್ನಾಟಕದ ಆರ್ಥಿಕ ಚಹರೆಯೇ ಬದಲಾಗಲಿದೆ. ನಾನಾ ಹೆಸರಾಂತ ಕಂಪನಿಗಳು ವಿಜಯಪುರ ಜಿಲ್ಲೆಯಲ್ಲಿ ಒಟ್ಟು 45 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಬಂಡವಾಳ ಹೂಡಿಕೆ ಮಾಡಲು ಆಸಕ್ತಿ ವ್ಯಕ್ತಪಡಿಸಿದ್ದು, ಇದರಿಂದಾಗಿ ಜಿಲ್ಲೆಯು ಭವಿಷ್ಯದಲ್ಲಿ ಮ್ಯಾನ್ಯುಫ್ಯಾಕ್ಚರಿಂಗ್ ಕ್ಲಸ್ಟರ್ ಆಗಿ ರೂಪುಗೊಳ್ಳಲಿದೆ ಎಂದು ಅವರು ಹೇಳಿದರು.
ಸಂವಿಧಾನ ಬದ್ಧವಾದ ಮೌಲ್ಯಯುತ ಪರಂಪರೆಯಲ್ಲಿ ಮತ್ತು ಅಖಂಡತೆಯ ತತ್ವದಲ್ಲಿ ನಂಬಿಕೆಯಿಟ್ಟು, ಜಾತ್ಯಾತೀತ ಭವ್ಯತೆಯನ್ನು ಮತ್ತು ಸಾರ್ವಭೌಮತೆಯನ್ನು ಸಂರಕ್ಷಿಸಿಕೊಂಡು ಜನಪರ ಆಡಳಿತ ನೀಡುತ್ತಿರುವ ನಮ್ಮ ನಾಡಿನ ಹೆಮ್ಮೆಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಸಮರ್ಥ ನಾಯಕತ್ವದಲ್ಲಿ ನಮ್ಮ ಕರ್ನಾಟಕ ಸರ್ಕಾರವು ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ ಹಾಗೂ ಕಾಳಜಿಪೂರ್ವಕವಾದ ಪಾರದರ್ಶಕ ಆಡಳಿತ ನೀಡುತ್ತ ರಾಜ್ಯದ ಸರ್ವ ಜನರ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ವಿಶೇಷವಾಗಿ ಸಂವಿಧಾನದ ಮಹತ್ವದ ಕುರಿತು ಜಾಗೃತಿಯನ್ನು ಮೂಡಿಸಲು ಸರ್ಕಾರಿ ಕಚೇರಿಗಳಲ್ಲಿ ಸಂವಿಧಾನದ ಆತ್ಮವೆಂದೆ ಕರೆಯಲ್ಪಡುವ ಪೀಠಿಕೆಯನ್ನು ಅಳವಡಿಸಲಾಗಿರುತ್ತದೆ. ಪ್ರತಿನಿತ್ಯ ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆಯನ್ನು ಓದಿಸಲಾಗುತ್ತಿದೆ. ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಸಂವಿಧಾನ ಸಮರ್ಪಣಾ ದಿನಾಚರಣೆಗಳನ್ನು ಅತ್ಯಂತ ವೈಶಿಷ್ಟ ಪೂರ್ಣವಾಗಿ ಆಚರಿಸುವುದರ ಮೂಲಕ ಸಂವಿಧಾನದ ಜಾಗೃತಿಯನ್ನು ಮಾಡುವುದರೊಂದಿಗೆ ನಮ್ಮ ಸರ್ಕಾರ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿದೆ ಎಂದು ಅವರು ಹೇಳಿದರು.
ಈ ವೇಳೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಕೌಶಲ್ಯಾಭಿವೃದ್ಧಿ ನಗಮದ ಅಧ್ಯಕ್ಷೆ ಕಾಂತಾ ನಾಯಕ, ಜಿಲ್ಲಾಧಿಕಾರಿ ಡಾ.ಕೆ.ಆನಂದ, ಜಿಲ್ಲಾ ಪಂಚಾಯ್ತಿ ಸಿಇಒ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.




