ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಕನ್ನಡದ ಮೊಟ್ಟ ಮೊದಲ ಶಾಸನವಾದ ಹಲ್ಮಿಡಿ ಶಾಸನವನ್ನು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ ಹಾಗೂ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಉದ್ಘಾಟಿಸಿದರು. ಕರ್ನಾಟಕ ಸಂಭ್ರಮ-50ರ ಹಿನ್ನಲೆಯಲ್ಲಿ ‘ಹೆಸರಾಯಿತು ಕರ್ನಾಟಕ-ಉಸಿರಾಗಲಿ ಕನ್ನಡ’ ಅಭಿಯಾನದಡಿಯಲ್ಲಿ ನವೆಂಬರ್-2023ರಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದೆ ರೀತಿ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಹಲ್ಮಿಡಿ ಶಾಸನ ಪ್ರತಿಕೃತಿ ಅಳವಡಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ.
4ನೇ ಶತಮಾನದಲ್ಲಿಯೇ ಹಲ್ಮಿಡಿ ಶಾಸನ ರೂಪಗೊಂಡಿದೆ. ಹಾಸನ ಜಿಲ್ಲೆಯ ಹಲ್ಮಿಡಿಯಲ್ಲಿ ಪತ್ತೆಯಾಗಿದೆ. 1936ರಲ್ಲಿ ಹಿರಿಯ ಸಂಶೋಧಕ ಡಾ.ಎಂ.ಎಚ್ ಕೃಷ್ಣ ಅವರಿಂದ ಸಂಶೋಧಿಸಲಾಗಿದೆ. ಕನ್ನಡಿಗರಾದ ಕದಂಬ ರಾಜ ಮನೆತನದ ಬಗ್ಗೆ ಇದು ತಿಳಿಸಿಕೊಡುತ್ತೆ. ಕ್ರಿ.ಶ 450ರಲ್ಲಿ ಇದು ರಚಿತವಾಗಿದೆ ಎಂದು ಅಂದಾಜಿಸಲಾಗಿದೆ. ಇದನ್ನು ಪ್ರತಿಯೊಬ್ಬರು ವೀಕ್ಷಿಸುವ ದೃಷ್ಟಿಯಿಂದ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಕೃತಿಯನ್ನು ಅಳವಡಿಸಲಾಗುತ್ತಿದೆ.