Ad imageAd image

ವಿದ್ಯಾರ್ಥಿಗಳ ಪ್ರಗತಿಗೆ ಶಿಕ್ಷಕರು, ಅಧಿಕಾರಿಗಳು ಶ್ರಮಿಸಬೇಕು: ಸಚಿವ ಎಂ.ಬಿ ಪಾಟೀಲ

Nagesh Talawar
ವಿದ್ಯಾರ್ಥಿಗಳ ಪ್ರಗತಿಗೆ ಶಿಕ್ಷಕರು, ಅಧಿಕಾರಿಗಳು ಶ್ರಮಿಸಬೇಕು: ಸಚಿವ ಎಂ.ಬಿ ಪಾಟೀಲ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಶಾಲೆಗಳಿಗೆ ಶಿಕ್ಷಕರು ಹೃದಯವಿದ್ದ ಹಾಗೆ, ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ  ಗುಣಮಟ್ಟದ ಶಿಕ್ಷಣ ದೊರಕಿಸಲು ಶಿಕ್ಷಕರು ಯೋಜನಾ ಬದ್ಧವಾಗಿ ಪಾಠ ಬೋಧನೆಗೆ ಆದ್ಯತೆ ನೀಡುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಕರೆ ನೀಡಿದರು. ನಗರದ ಹೆಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಶಾಲಾ ಶಿಕ್ಷಣ ಇಲಾಖೆ ಹಾಗೂ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇವರ ಸಹಯೋಗದಲ್ಲಿ ಗ್ರಾಮೀಣ ವಲಯದ ಎಸ್‌ಎಸ್‌ಎಲ್‌ಸಿ 2026 ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ ಪುನಶ್ಚೇತನ ಕಾರ್ಯಾಗಾರ ಹಾಗೂ ತಾಲೂಕು ಮಟ್ಟದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರು ಮಾತನಾಡಿದರು.

ಪಾಲಕರು ಕಡ್ಡಾಯವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಗುಣಮಟ್ಟದ ಶಿಕ್ಷಣ ಒದಗಿಸುವ ಮೂಲಕ ಮಕ್ಕಳ ಶೈಕ್ಷಣಿಕ ಮಟ್ಟದ ಬೆಳವಣಿಗೆಗಾಗಿ ಪಾಲಕರು, ಶಿಕ್ಷಕರು ವಿಶೇಷ ಗಮನ ಹರಿಸಬೇಕು. ಜಿಲ್ಲೆಯಲ್ಲಿ ಶಿಕ್ಷಣಕ್ಕಾಗಿ ಹೆಚ್ಚಿನ ಒತ್ತು ನೀಡಿ ಅವಶ್ಯಕ ವಾತಾವರಣ ನಿರ್ಮಿಸಲಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವತ್ತ ಎಲ್ಲರೂ ಶ್ರಮಿಸಬೇಕು. ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ದೃಷ್ಟಿಯಿಂದ ಜವಾಬ್ದಾರಿ ತೆಗೆದುಕೊಂಡು ಶಿಕ್ಷಕರು, ಅಧಿಕಾರಿಗಳು ಶ್ರಮಿಸುವ ಮೂಲಕ ಶೈಕ್ಷಣಿಕ ಗುಣಮಟ್ಟ ಹಾಗೂ ಎಸ್ಎಸ್ಎಲ್.ಸಿ ಫಲಿತಾಂಶ ಸುಧಾರಣೆಗೆ ಕೈ ಜೋಡಿಸಬೇಕು ಎಂದರು.

ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಾಧಿಕಾರಿ ಬಸವರಾಜ ತಳವಾರ ಅವರು ಮಾತನಾಡಿ, ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವ ಸಚಿವರ ಆಶಯದಂತೆ ಸಿಎಸ್‌ಆರ್ ಅನುದಾನವನ್ನು ಬಳಸಿಕೊಂಡು ಸುಸಜ್ಜಿತ ಸ್ಮಾರ್ಟಕ್ಲಾಸ್ ಕೊಠಡಿಗಳನ್ನು ನಿರ್ಮಾಣ ಮಾಡಿ, ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸಿ ಪ್ರೊತ್ಸಾಹಿಸಲಾಗುತ್ತಿದೆ ಅಂತಾ ಹೇಳಿದರು. ಚಾಣಕ್ಯ ಕರಿಯರ್ ಅಕಾಡೆಮಿಯ ಮುಖ್ಯಸ್ಥ ಎನ್.ಎಂ ಬಿರಾದಾರ ಮಾತನಾಡಿದರು.

2024-25ನೇ ಸಾಲಿನಲ್ಲಿ ತಾಲೂಕಾ ಮಟ್ಟದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ತಲಾ 50 ಸಾವಿರ ರೂಪಾಯಿಗಳ ಚೆಕ್  ಹಾಗೂ 2023-24ನೇ ಸಾಲಿನಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ತಾಲೂಕ ಮಟ್ಟದ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೀರಯ್ಯ ಸಾಲಿಮಠ, ವಿಜಯಪುರದ ಡಯಟ್ ಪ್ರಾಂಶುಪಾಲರಾದ ಉಮಾದೇವಿ ಸೊನ್ನದ, ಅಶೋಕ ಮಲಘಾಣ, ಮಾಚಪ್ಪನವರ, ಕೆ.ಬಿ ಪಾಟೀಲ ವಿವಿಧ ಗ್ರಾಮೀಣ ವಲಯದ ವ್ಯಾಪ್ತಿಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article