ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಸೋಮವಾರ ರಾತ್ರಿ ಸುರಿದ ಭರ್ಜರಿ ಮಳೆಯಿಂದಾಗಿ(Rain) ಜಿಲ್ಲೆಯಾದ್ಯಂತ ಸಾಕಷ್ಟು ಹಾನಿಯಾಗಿದೆ. ನಗರದಲ್ಲೂ ಅಪಾರ ಪ್ರಮಾಣದಲ್ಲಿ ನಷ್ಟವಾಗಿದ್ದು, ಇಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ(M.B Patil) ಅವರು ಮಹಾನಗರ ಪಾಲಿಕೆ ವ್ಯಾಪ್ತಿಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಾರ್ಡ್ 6ರ ಕೆ.ಸಿ.ನಗರ, ಡಿಸಿಸಿ ಬ್ಯಾಂಕ್ ಹತ್ತಿರ ಬಬಲೇಶ್ವರ ನಾಕಾ ಹತ್ತಿರದ ಬಾಗವಾನ ಕಾಲೋನಿ, ಪ್ರೇಮ ನಗರ, ನವಭಾಗ ರಸ್ತೆಯ ಕೋಟೆ ಗೋಡೆ ಹತ್ತಿರ, ಜುಮ್ಮಾ ಮಸಜೀದ್, ವಾರ್ಡ್ ನಂಬರ್ 14 ರ ಅಪ್ಸರಾ ಥೇಟರ್ ಹತ್ತಿರ ಸಂಚರಿಸಿ ಪರಿಶೀಲನೆ ನಡೆಸಿದರು.
ಮಳೆಯಿಂದ ಇಷ್ಟೊಂದು ಹಾನಿಯಾಗಿದೆ. ಆದರೆ, ಅಧಿಕಾರಿಗಳು ಇದುವರೆಗೂ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಿಲ್ಲವೆಂದು ಸ್ಥಳೀಯರು ಸಚಿವರ ಮುಂದೆ ತಮ್ಮ ಅಳಲು ತೋಡಿಕೊಂಡರು. ಆಗ ಗರಂ ಆದ ಸಚಿವರು, ಕೂಡಲೇ ಸರಿಯಾಗಿ ಕೆಲಸ ಮಾಡಬೇಕು. ಇಲ್ಲದೇ ಹೋದರೆ ನಿಮ್ಮನ್ನ ಅಮಾನತು ಮಾಡಲಾಗುವುದು. ಇದು ಎಚ್ಚರಿಕೆ ಎಂದು ಕ್ಲಾಸ್ ತೆಗೆದುಕೊಂಡರು. ಪಿಡಬ್ಲುಡಿ ಇಲಾಖೆಯ ಕುರಿತು ಸಾಕಷ್ಟು ದೂರುಗಳಿದ್ದು, ಅದೆಲ್ಲದರ ಸಮೀಕ್ಷೆಯಾಗಬೇಕು. ಇನ್ನು ಕೆಲ ದಿನಗಳಲ್ಲಿ ನೀವು ನಿವೃತ್ತಿಯಾಗುತ್ತಿದ್ದೀರಿ. ನಿಮಗೂ ಅಮಾನತು ಮಾಡಲಾಗುವುದು. ನಿಮ್ಗೆ ಪಿನ್ಸನ್ ಸಿಗೋದಿಲ್ಲ ನೋಡ್ರಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಈ ವೇಳೆ ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ, ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಸಿ.ಬಿ.ಚಿಕ್ಕಲಕಿ ಸೇರಿದಂತೆ ಅಧಿಕಾರಿ ಉಪಸ್ಥಿತರಿದ್ದರು.