ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಪಟ್ಟಣದಲ್ಲಿರುವ ವಿರಕ್ತಮಠದ ಆಸ್ತಿ ವಕ್ಫ್ ಆಸ್ತಿ ಎಂದು 11ನೇ ಕಲಂನಲ್ಲಿ ಸೇರಿದೆ. ಅದು ತಪ್ಪಾಗಿ ಸೇರಿದೆ ಅದನ್ನು ತೆಗೆದು ಹಾಕಲಾಗುವುದು ಎಂದು ಉಸ್ತುವಾರಿ ಸಚಿವರಾದ ಎಂ.ಬಿ ಪಾಟೀಲರು ಹೇಳಿದ್ದಾರೆ. ಆದರೆ, 10-01-2019ರಲ್ಲಿ ಇದು ವಕ್ಫ್ ಆಸ್ತಿ ಎಂದು 11ನೇ ಕಲಂನಲ್ಲಿ ಸೇರಿದೆ. ಅಲ್ಲಿಂದ ಇಲ್ಲಿಯ ತನಕ ಮಠದ ಸ್ವಾಮೀಜಿ ತಹಶೀಲ್ದಾರರಿಗೆ ಒಂದು ಅರ್ಜಿ ಕೊಟ್ಟಿಲ್ಲ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಬುಧವಾರ ಮಾಧ್ಯಮಗೋಷ್ಠಿ ಮಾತನಾಡಿದ ಅವರು, 5 ಎಕರೆ 19 ಗುಂಟೆ ಎಂದು ದಾಖಲಾಗಿದೆ. ಈ ಬಗ್ಗೆನೂ ಕೇಳಿಲ್ಲ. ಬಿಜೆಪಿ ನಿಯೋಗ ಬಂದಾಗ ಇದನ್ನು ಪ್ರಸ್ತಾಪ ಮಾಡ್ತಾರೆ ಅಂದರೆ ಉದೇಶ ಬೇರೆ ಇದೆ. ವಿರಕ್ತಮಠ ಆಸ್ತಿ ವಿವಾದವಾಗಿ ಕೋರ್ಟ್ ನಲ್ಲಿದೆ. ಕೋರ್ಟ್ ನಲ್ಲಿ ಎಲ್ಲ ಆಸ್ತಿಗಳನ್ನು ಕುರಿತು ನಿರ್ದೇಶನ ನೀಡಿ, ಪರಭಾರೆ ಮಾಡಬಾರದು ಎಂದು ಹೇಳಿದೆ. ಜಿಲ್ಲಾಧಿಕಾರಿಗಳು ತಹಶೀಲ್ದಾರ್ ಅವರಿಗೆ ಪತ್ರ ಬರೆದಿದ್ದಾರೆ. ಕೋರ್ಟ್ ನಲ್ಲಿ ಇತ್ಯರ್ಥವಾಗುವ ತನಕ ವಿರಕ್ತಮಠದ ಆಸ್ತಿ ಯಾರಿಗೂ ಪರಭಾರೆ ಮಾಡಬಾರದು ಎಂದಿದೆ. ನಿಮ್ಮ ಮಠದ ಆಸ್ತಿಯಲ್ಲಿ ವಕ್ಫ್ ಎಂದು ಬಂದಾಗ ನೀವು ಅರ್ಜಿ ಯಾಕೆ ಕೊಡಲಿಲ್ಲ ಎಂದು ಪ್ರಶ್ನಿಸಿದರು.
ಇಲ್ಲಿ ನೋಟಿಸ್ ಕೊಡುತ್ತಿರುವುದು ರೈತರ ಆಸ್ತಿಗಳನ್ನು ಕಿತ್ತುಕೊಳ್ಳುವುದಲ್ಲ. ವಕ್ಫ್ ಆಸ್ತಿ ಎಷ್ಟಿದೆ ಅನ್ನೋದು ತಿಳಿದುಕೊಂಡು ಅದನ್ನು ಸಂರಕ್ಷಣೆ ಮಾಡುವುದು. ಸಿಂದಗಿಯಲ್ಲಿ 143 ಪ್ರಕರಣಗಳಿವೆ. ಇದರಲ್ಲಿ 63 ಪರಭಾರೆಯಾಗಿವೆ. ಕಲಂ 9ರಲ್ಲಿ ಇದ್ದರೆ ತೆಗೆಯಲು ಸಾಧ್ಯವಿಲ್ಲ. ಕಲಂ 11ರಲ್ಲಿದೆ. ಇದನ್ನು ತೆಗೆಯಬಹುದು. ಹೀಗಾಗಿ ದಾಖಲೆಗಳನ್ನು ತಂದು ಕೊಡಿ ಎಂದು ಕೇಳುತ್ತಿದ್ದಾರೆ. ಇಂಡಿ ತಾಲೂಕಿನ ತನಿಹಳ್ಳಿಯಲ್ಲಿ ಯಮನಪ್ಪ ಮಲಕಪ್ಪ ಕಂಗನಾಳ ಆಸ್ತಿಯಲ್ಲಿ ಕರ್ನಾಟಕ ವಕ್ಫ್ ಬೋರ್ಡ್ ಎಂದು ಇತ್ತು. ದಾಖಲೆ ನೀಡಿದ್ದಾರೆ, ಅದನ್ನು ಈಗ ತೆಗೆದು ಹಾಕಲಾಗಿದೆ ಎಂದು ದಾಖಲೆಗಳನ್ನು ತೋರಿಸಿದರು.
”ವಕ್ಫ್ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯವರು ಉಪ ಚುನಾವಣೆ ದೃಷ್ಟಿಯಿಂದ ವಿವಾದ ಮಾಡುತ್ತಿದ್ದಾರೆ. ಇದರ ಬಗ್ಗೆ ಧ್ವನಿ ಎತ್ತಿದ ಬಸನಗೌಡ ಪಾಟೀಲ ಯತ್ನಾಳ್, ವಿಜಯಪುರ ಸಂಸದರ ಹೆಸರನ್ನೇ ಬಿಜೆಪಿ ನಿಯೋಗದಲ್ಲಿ ಇರಲಿಲ್ಲ. ಕಾರ್ಯಕರ್ತರು ಗಲಾಟೆ ಮಾಡಿದ ಬಳಿಕ ಸೇರಿಸಿದ್ದಾರೆ. ಮೊದಲು ಯತ್ನಾಳ್, ವಿಜಯೇಂದ್ರ ತಮ್ಮನ್ನು ಸರಿಪಡಿಸಿಕೊಳ್ಳಲಿ”. – ಅಶೋಕ ಮನಗೂಳಿ, ಶಾಸಕರು, ಸಿಂದಗಿ
ವಕ್ಫ್ ಅದಾಲತ್ ಮಾಡಿರುವ ಉದ್ದೇಶ ಸಹ ವಿವಾದಿತ ಜಾಗಗಳ ಸಮಸ್ಯೆಗಳನ್ನು ಇತ್ಯರ್ಥಗೊಳಿಸುವುದಾಗಿದೆ. ವಿಜಯಪುರದಲ್ಲಿ ನಡೆದ ವಕ್ಫ್ ಅದಾಲತ್ ನಲ್ಲಿ ಪೂರ್ತಿಯಾಗಿ ಭಾಗವಹಿಸಿದ್ದೇನೆ. ಇಲ್ಲಿ ರೈತರ ಕುರಿತು ಚರ್ಚೆಯಾಗಿಲ್ಲ. ಮುಸ್ಲಿಂ ಸಮುದಾಯಗಳ ನಡುವೆಯೆ ಇರುವ ಅನೇಕ ದೂರುಗಳ ಬಂದಿವೆ. ಎಷ್ಟೋ ಮುಸ್ಲಿಂರಿಗೂ ನೋಟಿಸ್ ಕೊಡಲಾಗಿದೆ. ಸಿಂದಗಿ ತಾಲೂಕಿನ ರೈತರು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಯಾವುದೇ ಆಸ್ತಿಗಳನ್ನು ವಾಪಸ್ ಪಡೆಯುವ ಯಾವ ಉದ್ದೇಶ ನಮ್ಮ ಸರ್ಕಾರಕ್ಕೆ ಇಲ್ಲ. ದಾಖಲೆಗಳನ್ನು ಸಲ್ಲಿಸಿದರೆ ಅದು ಸರಿಪಡಿಸಿಕೊಡಲಾಗುವುದು ಎಂದು ಹೇಳಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರ ಕಾಂಗ್ರೆಸ್ ಮುಖಂಡರಾದ ಎಸ್.ಎಂ ಪಾಟೀಲ ಗಣಿಯಾರ, ಮಲ್ಲಣ್ಣ ಸಾಲಿ, ಚನ್ನು ವಾರದ, ಪರಶುರಾಮ ಕಾಂಬ್ಳೆ, ಪ್ರವೀಣ ಕಂಟಿಗೊಂಡ ಸೇರಿ ಇತರರು ಉಪಸ್ಥಿತರಿದ್ದರು.