ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಮುಂದಿನ ಗಾಂಧಿ ಜಯಂತಿ ಬರುವುದರೊಳಗಾಗಿ ಅದ್ಭುತವಾದ ನೂತನ ಗಾಂಧಿ ಪ್ರತಿಮೆಯನ್ನು ಪಟ್ಟಣದಲ್ಲಿರುವ ಗಾಂಧಿ ವೃತ್ತದಲ್ಲಿ ಸ್ಥಾಪಿಸಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ಗಾಂಧಿ ಜಯಂತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅಹಿಂಸೆಯ ಮೂಲಕ ವಿಶ್ವಕ್ಕೆ ಬಹುದೊಡ್ಡ ಸಂದೇಶ ನೀಡಿದವರು ಗಾಂಧೀಜಿ. ಹಾಗೇ ಅತ್ಯಂತ ಪ್ರಮಾಣಿಕ, ಭ್ರಷ್ಟಾಚಾರ ರಹಿತ ಆಡಳಿತ ನೀಡಿದವರು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಯವರು. ಇವರ ಬದುಕು ನಮಗೆ ಆದರ್ಶ ಎಂದರು.
ನಮ್ಮ ತಂದೆಯವರು ಶಾಸಕರಾಗಿದ್ದ ವೇಳೆ 1994-95ರಲ್ಲಿ ಗಾಂಧಿ ಪ್ರತಿಮೆ ಸ್ಥಾಪಿಸಲಾಗಿದೆ. ಚಿಕ್ಕರೂಗಿಯಲ್ಲಿ 7 ಜನ ಸ್ವತಂತ್ರ ಹೋರಾಟಗಾರರಿದ್ದರು. ಸಿಂದಗಿಯಲ್ಲಿ ಗಾಂಧಿ ಪ್ರತಿಮೆಯಾಗುವ ತನಕ ನಾವು ಸಿಂದಗಿಗೆ ಬರುವುದಿಲ್ಲ ಎಂದಿದ್ದರು. ಅವರ ಪ್ರತಿಜ್ಞೆಯ ಫಲವಾಗಿ ಗಾಂಧಿ ಪ್ರತಿಮೆ ನಿರ್ಮಾಣವಾಯಿತು. ಮುಂದಿನ ದಿನಗಳಲ್ಲಿ ಸುಂದರವಾದ ನೂತನ ಗಾಂಧಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಮಲ್ಲಣ ಸಾಲಿ, ಆಲಮೇಲ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಸಾದಿಕ ಸುಂಬಡ, ವಕೀಲರ ಸಂಘದ ಅಧ್ಯಕ್ಷ ಬಿ.ಎಸ್ ಪಾಟೀಲ ಮಾತನಾಡಿದರು.
ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಹದ್ನೂರ, ಅಲ್ಪಸಂಖ್ಯಾತರ ಘಟಕದ ಎಂ.ಎ ಖಜೀಬ ಸೇರಿದಂತೆ ಇತರರು ವೇದಿಕೆ ಮೇಲಿದ್ದರು. ಇನ್ನು ಗಾಂಧೀಜಿಯವರು ಬೆಳಗಾವಿಯಲ್ಲಿ 1924ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿಕೊಂಡು 100 ವರ್ಷವಾದ ಹಿನ್ನಲೆಯಲ್ಲಿ ಬ್ಲಾಕ್ ಕಾಂಗ್ರೆಸ್ ಕಚೇರಿಯಿಂದ ಅಂಬೇಡ್ಕರ್ ಭವನದ ತನಕ ‘ಗಾಂಧಿ ನಡಿಗೆ’ ಹೆಸರಿನ ಮೂಲಕ ಹೆಜ್ಜೆ ಹಾಕಲಾಯಿತು. ವಿವಿಧ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಜಾಗೃತಿ ಮೂಡಿಸಿದರು.