Ad imageAd image

ಅಫಿಡವಿಟ್ ನಲ್ಲಿ ಶಾಸಕ ಬೆಲ್ಲದ ಸುಳ್ಳು ಮಾಹಿತಿ: ಗುರುರಾಜ ಹುಣಸಿಮರದ

Nagesh Talawar
ಅಫಿಡವಿಟ್ ನಲ್ಲಿ ಶಾಸಕ ಬೆಲ್ಲದ ಸುಳ್ಳು ಮಾಹಿತಿ: ಗುರುರಾಜ ಹುಣಸಿಮರದ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ(Hubballi): ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಹಾಗೂ ಶಾಸಕ ಅರವಿಂದ ಬೆಲ್ಲದ(Aravind bellad) ಅವರು ತಮ್ಮ ಅಫಿಡವಿಟ್‌ನಲ್ಲಿ ಚುನಾವಣಾ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆ. ತಮ್ಮ ಮೇಲೆ ಪ್ರಕರಣ ದಾಖಲಾಗಿದ್ದರೂ, ಅದನ್ನು ಮರೆಮಾಚುವ ಪ್ರಯತ್ನ ಮಾಡಿದ್ದಾರೆ ಎಂದು ಜೆಡಿಎಸ್(JDS) ರಾಜ್ಯ ವಕ್ತಾರ ಗುರುರಾಜ ಹುಣಸಿಮರದ(Gururaja Hunasimarad) ಆರೋಪಿಸಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಫಿಡವಿಟ್‌ನಲ್ಲಿ ಸುಳ್ಳು ಮಾಹಿತಿ ನೀಡಿದ ಅವರ ವಿರುದ್ಧ ಹೋರಾಡುತ್ತಿರುವ ಎಸ್.ಬಿ.ಅಬ್ದುಲ್ ಹಮೀದ್‌ಗೆ ಗೃಹ ಇಲಾಖೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

ಅರವಿಂದ ಬೆಲ್ಲದ ಅವರು ತಮ್ಮದೇ ಕಂಪನಿಯ ಕೆಲಸಗಾರನಿಗೆ ಅನ್ಯಾಯ ಮಾಡಿ, ಮಾರಣಾಂತಿಕ ಹಲ್ಲೆ ನಡೆಸುವ ಹಂತಕ್ಕೆ ಹೋಗಿರುವುದು ಅವರ ಗೋಮುಖ ವ್ಯಾಘ್ರ್ಯವನ್ನು ತೋರಿಸುತ್ತದೆ. ಹೀಗಾಗಿ ದೂರುದಾರರಿಗೆ ಏನಾದರೂ ತೊಂದರೆಯಾದರೆ ಅದಕ್ಕೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಅವರೇ ನೇರ ಹೊಣೆಗಾರರು ಎಂದರು.

ಎಸ್.ಬಿ.ಅಬ್ದುಲ್ ಹಮೀದ್ ಅವರು ಬೆಲ್ಲದ ಆ್ಯಂಡ್ ಕಂಪನಿಯ ಎಂಡಿ ಹಾಗೂ ಅಶೋಕ್ ಲೇಲ್ಯಾಂಡ್ ಮಾರಾಟ ಪ್ರತಿನಿಧಿಯಾಗಿ ನೇಮಕಗೊಂಡಿದ್ದರು. ಅವರಿಗೆ 2010-11ರಲ್ಲಿ ಉತ್ತಮ ಕೆಲಸಗಾರ ಎಂದು ಅವಾರ್ಡ್ ಸಹ ನೀಡಲಾಗಿದೆ. ಹಮೀದ್ ಅವರು ತಮಗೆ ಬರಬೇಕಾದ ವೇತನ ಹಾಗೂ ಇನ್ಸೆಂಟಿವ್ ನೀಡುವಂತೆ ಕೇಳಿದ ಕಾರಣಕ್ಕೆ ಅವರ ಮೇಲೆ 2015ರ ಜುಲೈ 23ರಂದು ಬೆಲ್ಲದ ಸೇರಿದಂತೆ ಇತರರು ಹಲ್ಲೆ ಮಾಡಿದ್ದಾರೆ. ಆ ಕುರಿತು ಎಫ್ಐಆರ್ ಸಹ ದಾಖಲು ಮಾಡಲಾಗಿದೆ. ಆದರೂ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವಾಗ ತಮ್ಮ ಮೇಲೆ ಯಾವುದೇ ಪ್ರಕರಣ ಇಲ್ಲ ಎಂದು ದೃಢೀಕರಿಸಿದ್ದಾರೆ. ಅದರಂತೆ 2023ರ ಡಿಸೆಂಬರ್ 12ರಂದು ಬೆಲ್ಲದ ಮೇಲೆ ಸಮನ್ಸ್ ಜಾರಿ ಮಾಡಲಾಗಿದೆ. ಅದಕ್ಕೆ ಬೇಲ್ ಸಹ ಪಡೆದಿದ್ದು, ಅದನ್ನು ಪ್ರಮಾಣ ಪತ್ರದಲ್ಲಿ ದಾಖಲಿಸಿಲ್ಲ ಎಂದು ಹುಣಸೀಮರದ ಆರೋಪಿಸಿದರು.

ಸಂತ್ರಸ್ತ ಎಸ್.ಬಿ.ಅಬ್ದುಲ್ ಹಮೀದ್ ಮಾತನಾಡಿ, 2024ರ ಫೆಬ್ರುವರಿ 15ರಂದು ಕೇಸ್ ವಾಪಸ್ ತೆಗೆದುಕೊಳ್ಳದೇ ಹೋದರೆ ನಿನ್ನನ್ನು ಮತ್ತು ನಿನ್ನ ಕುಟುಂಬವನ್ನು ಮುಗಿಸುತ್ತೇನೆ ಎಂದು ಕೋರ್ಟ್ ಆವರಣದಲ್ಲಿಯೇ ಶಾಸಕ ಅರವಿಂದ ಬೆಲ್ಲದ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು. ಈ ಕುರಿತು ನಾನು ಸಿಎಂ, ಸಭಾಪತಿಗೆ ಹಾಗೂ ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದೇನೆ. ಜುಲೈ 30ರಂದು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ಮುಂದೆ ಹಾಜರಾಗಿ ಸಾಕ್ಷಿ ಹೇಳಿದ್ದೇನೆ. ಅವರಿಗೆ ತಕ್ಕ ಶಾಸ್ತಿ ಆಗಬೇಕು ಎಂದರು.

ನಾನು ಬೆಲ್ಲದ ಕಂಪನಿಯಲ್ಲಿ 2007ರಿಂದ 2012ರ ವರೆಗೆ ಸೇವೆ ಸಲ್ಲಿಸಿದ್ದೇನೆ. ನನಗೆ ಬರಬೇಕಾದ ವೇತನ 10 ಸಾವಿರ ಮತ್ತು ಇನ್ಸೆಂಟಿವ್ ಸೇರಿ ಒಟ್ಟು 1 ಕೋಟಿಗೂ ಅಧಿಕ ಹಣ ಬಂದಿಲ್ಲ. ವೇತನ ಕೇಳಿದ್ದಕ್ಕೆ ನನ್ನನ್ನು ಕೆಲಸದಿಂದ ಕಿತ್ತು ಹಾಕಿದ್ದಾರೆ. ಅನೇಕ ಗ್ರಾಹಕರಿಗೆ ಕೋಟ್ಯಂತರ ರೂಪಾಯಿ ಅನ್ಯಾಯ ಮಾಡಿದ್ದಾರೆ. 2015ರಲ್ಲಿ ಬೆಲ್ಲದ ವಿರುದ್ಧ ನಾನು ಪ್ರಕರಣ ದಾಖಲಿಸಿದ್ದೇನೆ. ಕೊಪ್ಪಳದಲ್ಲಿ ಒಂದು ಶೋರೂಮ್ ಹಾಗೂ ಕೊಪ್ಪಳ ತಾಲೂಕಿನ ಹಿಟ್ನಾಳ್ ಗ್ರಾಮದ ಒಂದು ಶೋ ರೂಮ್ ಅವರ ಹಾಗೂ ಪತ್ನಿ ಹೆಸರಿನಲ್ಲಿ ಇದ್ದರೂ, ಅನೇಕ ಮಾಹಿತಿಯನ್ನು ಮುಚ್ಚಿಟ್ಟು ಚುನಾವಣೆ ಅಧಿಕಾರಿಗಳಿಗೆ ಅಫಿಡವಿಟ್ ಸಲ್ಲಿಸಿದ್ದಾರೆ. ಈ ಬಗ್ಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದು, ಪ್ರಕರಣ ವಿಚಾರಣೆ ಹಂತದಲ್ಲಿದೆ ಎಂದ ಅವರು, ನನಗೆ ಹಾಗೂ ನನ್ನ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು. ಜತೆಗೆ ಕೋರ್ಟ್ ಸಾಕ್ಷಿಗೆ ಹೋಗಲು ನನಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.

WhatsApp Group Join Now
Telegram Group Join Now
Share This Article