ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಓಬಾಳಪುರಂ ಗಣಿಗಾರಿಕೆ ಕಂಪನಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಶಾಸಕ ಜನಾರ್ದನ್ ರೆಡ್ಡಿ ಅಪರಾಧಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಜನಾರ್ದನ್ ರೆಡ್ಡಿ ವಿರುದ್ಧದ ಆರೋಪಗಳು ಸಾಬೀತಾಗಿದ್ದು, ಅಪರಾಧಿ ಎಂದು ತೀರ್ಪು ನೀಡಿ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.
2008 ರಿಂದ 2013ರ ಅವಧಿಯ ನಡುವೆ ಅಕ್ರಮ ಗಣಿಗಾರಿಕೆ ನಡೆದಿತ್ತು ಎಂದು ಸಾಬೀತಾಗಿದೆ. ಕರ್ನಾಟಕ ಹಾಗೂ ಆಂಧ್ರಪ್ರದೇಶದ ಗಡಿಭಾಗದಲ್ಲಿ ಓಬಾಳಪುರಂನಲ್ಲಿ ಅಕ್ರಮ ಗಣಿಗಾರಿಕೆ ನಡೆಸಲಾಗಿದೆ. ಶ್ರೀನಿವಾಸ್ ರೆಡ್ಡಿ ಈ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಜನಾರ್ದನ್ ರೆಡ್ಡಿ ಮುಖ್ಯಸ್ಥರಾಗಿದ್ದರು. 2009ರಲ್ಲಿ ಆಂಧ್ರ ಸರ್ಕಾರದ ಮನವಿ ಮೇರೆಗೆ ಸಿಬಿಐ ತನಿಖೆ ನಡೆಸಿತ್ತು. 2011ರಲ್ಲಿ ಮೊದಲ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು.
ಮುಂದೆ ಚಾರ್ಜ್ ಶೀಟ್ ನಲ್ಲಿ ಐಎಎಸ್ ಅಧಿಕಾರಿ ಶ್ರೀಲಕ್ಷ್ಮಿ, ರೆಡ್ಡಿ ಆಪ್ತ ಸಹಾಯಕ ಮೆಫಾಜ್ ಅಲಿ ಖಾನ್, ಮಾಜಿ ಸಚಿವೆ ಸಬಿತಾ ಇಂದ್ರ ರೆಡ್ಡಿ, ಬಿ.ವಿ ಶ್ರೀನಿವಾಸ್ ರೆಡ್ಡಿ, ವಿ.ಡಿ ಗೋಪಾಲ್, ಮಾಜಿ ಐಎಎಸ್ ಅಧಿಕಾರಿ ಕೃಪಾನಂದಂ ಸೇರಿ 9 ಆರೋಪಿಗಳ ಹೆಸರನ್ನು ಸೇರಿಸಿ ಮತ್ತೊಂದು ಚಾರ್ಜ್ ಶೀಟ್ ಸಲ್ಲಿಸಲಾಯಿತು. ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ವಿಚಾರಣೆ ನಡೆದಿತ್ತು. ಮೇ ಅಂತ್ಯದೊಳಗೆ ವಿಚಾರಣೆ ಪೂರ್ಣಗೊಳಿಸಲು ಗಡುವು ನೀಡಿತ್ತು. ಇದೀಗ ಸಿಬಿಐ ವಿಶೇಷ ನ್ಯಾಯಾಲಯ ಜನಾರ್ದನ್ ರೆಡ್ಡಿಯನ್ನು ಅಪರಾಧಿ ಎಂದು ತೀರ್ಪು ನೀಡಿ, 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.