ಪ್ರಜಾಸ್ತ್ರ ಸುದ್ದಿ
ಕೊಲ್ಕತ್ತಾ(Kolkata): ಶಿಕ್ಷಕರ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ 25 ಸಾವಿರಕ್ಕೂ ಹೆಚ್ಚು ಶಿಕ್ಷಕರನ್ನು ಕೊಲ್ಕತ್ತಾ ಹೈಕೋರ್ಟ್ ವಜಾಗೊಳಿಸಿತ್ತು. ನೇಮಕಾತಿ ಆದೇಶವನ್ನು ರದ್ದುಗೊಳಿಸಿದ ಕೊಲ್ಕತ್ತಾ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಗುರುವಾರ ಎತ್ತಿ ಹಿಡಿದಿದೆ. ಇದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ತೀವ್ರ ಮುಖಭಂಗ ಎಂದು ವಿಶ್ಲೇಷಿಸಲಾಗುತ್ತಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ನ್ಯಾಯಮೂರ್ತಿ ಪಿ.ವಿ ಸಂಜಯ್ ಕುಮಾರ್ ಅವರಿದ್ದ ಪೀಠ ಹೈಕೋರ್ಟ್ ಆದೇಶ ಎತ್ತಿ ಹಿಡಿದಿದೆ.
ಇಡೀ ನೇಮಕಾತಿ ಪ್ರಕ್ರಿಯೆ ವಂಚನೆಯಿಂದ ಕೂಡಿದೆ. ಮೂರು ತಿಂಗಳೊಳಗಾಗಿ ಹೊಸ ನೇಮಕಾತಿ ಪ್ರಕ್ರಿಯೆಯನ್ನು ಮುಗಿಸಬೇಕು. ಇದರಲ್ಲಿ ಉತ್ತೀರ್ಣರಾದವರು 2016ರಲ್ಲಿ ನೇಮಕಾತಿಯಾಗಿ ವೇತನ ಪಡೆದವರು ವಾಪಸ್ ಮಾಡುವಂತಿಲ್ಲ. ಅನುತ್ತೀರ್ಣರಾದವರು ವೇತನ ವಾಪಸ್ ಮಾಡಬೇಕು ಎಂದು ಹೇಳಿದೆ. ಅಲ್ಲದೆ ವಿಕಚೇತನರಿಗೆ ಇದರಿಂದ ವಿನಾಯ್ತಿ ನೀಡಿದ್ದು ಸೇವೆಯಲ್ಲಿ ಮುಂದುವರೆಯಬಹುದು ಎಂದು ತೀರ್ಪಿನಲ್ಲಿ ಹೇಳಲಾಗಿದೆ.
2016ರಲ್ಲಿ ಶಿಕ್ಷಕರ ಹುದ್ದೆಗೆ ನೇಮಕಾತಿ ಪರೀಕ್ಷೆ ನಡೆಸಲಾಗಿದೆ. 23 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಎದುರಿಸಿದ್ದರು. 24,640 ಖಾಲಿ ಹುದ್ದೆಗಳಿದ್ದವು. ಆದರೆ, ಸರ್ಕಾರ 25,753 ನೇಮಕಾತಿ ಪತ್ರಗಳನ್ನು ನೀಡಿತ್ತು. ಇಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪ ಕೇಳಿ ಬರುತ್ತಿದ್ದಂತೆ ಟಿಎಂಸಿ ಸರ್ಕಾರದ ವಿರುದ್ಧ ಹೋರಾಟಗಳು ನಡೆದವು. ಹೈಕೋರ್ಟ್ ನಲ್ಲಿ ವಿಚಾರಣೆ ನಡೆದು ನೇಮಕಾತಿ ರದ್ದುಗೊಳಿಸಬೇಕು ಎನ್ನುವ ಆದೇಶ ಬಂದಿತು. ಇದನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೋಗಿತ್ತು. ಅಲ್ಲಿಯೂ ಸರ್ಕಾರಕ್ಕೆ ಸೋಲಾಗಿದೆ.