ಪ್ರಜಾಸ್ತ್ರ ಸುದ್ದಿ
ಬಳ್ಳಾರಿ(Ballari): ನಿಜಕ್ಕೂ ಇದು ಅತ್ಯಂತ ನೋವಿನ ಸಂಗತಿ. ಮೂರು ಪುಟ್ಟ ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕುರುಗೋಡು ತಾಲೂಕಿನ ಬರದನಹಳ್ಳಿಯಲ್ಲಿ ನಡೆದಿದೆ. ಬುಧವಾರ ತಾಯಿ, ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಿದ್ದಮ್ಮ(30), ಅಭಿಗ್ನ(08), ಅವಣಿ(06) ಹಾಗೂ ಆರ್ಯ(04) ಮೃತ ದುರ್ದೈವಿಗಳು. ಬೆಳಗಾವಿ ಮೂಲದ ಸಿದ್ದಮ್ಮ, ಪತಿ ಕುಮಾರ ಕುರಿ ಮೇಯಿಸಲು ಬಳ್ಳಾರಿಗೆ ಬಂದಿದ್ದರು.
ಬರದನಹಳ್ಳಿಯ ರಾಘವೇಂದ್ರ ಎಂಬುವರ ಹೊಲದಲ್ಲಿ ಕುರಿಗಳ ಹಟ್ಟಿ ನಿರ್ಮಿಸಿಕೊಂಡಿದ್ದರು. ಬುಧವಾರ ಪತಿಯೊಂದಿಗೆ ಜಗಳವಾಗಿದೆ. ನಂತರ ಮಕ್ಕಳೊಂದಿಗೆ ಕುರಿ ಮೇಯಿಸಲು ಹೋಗಿದ್ದಾಳೆ. ಆದರೆ, ಸಂಜೆಯಾದರೂ ವಾಪಸ್ ಬಂದಿಲ್ಲ. ಪತಿ ಕುಮಾರ ಹುಡುಕಾಟ ನಡೆಸಿದ್ದಾನೆ. ಕೃಷಿ ಹೊಂಡದ ಬಳಿ ಕುರಿಗಳು ಇದ್ದವು, ಅದರಿಂದ ಅನುಮಾನ ಬಂದು ಕೃಷಿ ಹೊಂಡಕ್ಕೆ ಇಳಿದು ನೋಡಿದಾಗ ಆಘಾತವಾಗಿದೆ.
ಪತ್ನಿ ಸಿದ್ದಮ್ಮ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಬೆಳಕಿಗೆ ಬಂದಿದೆ. ಬಳಿಕ ಕುಮಾರ ಸಂಬಂಧಿಕರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ಮಾಡಿದರು. ಮೃತ ಸಿದ್ದಮ್ಮನ ಸಹದೋರನ ದೂರಿನ ಮೇರೆಗೆ ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುಡುಕಿನ ನಿರ್ಧಾರದಿಂದ ನಾಲ್ಕು ಜೀವಗಳು ಬಲಿಯಾಗಿರುವುದು ನಿಜಕ್ಕೂ ದುರಂತ.