ಪ್ರಜಾಸ್ತ್ರ ಸುದ್ದಿ
ಉಡುಪಿ(Udupi): ಬಿಜೆಪಿ ಹಿಂದೂಳಿದ ವರ್ಗಗಳ ಮೋರ್ಚಾದ ವತಿಯಿಂದ ಇಲ್ಲಿನ ಕುಂಜಿಬೆಟ್ಟ ಶಾರದ ಕಲ್ಯಾಣ ಮಂಟಪದಲ್ಲಿ ಭಾನುವಾರ ಕರಾವಳಿಯ ಸಾಹಿತಿಗಳು, ಕಲಾವಿದರು, ಕವಿಗಳು, ಚುಟುಕು ಬರಹಗಾರರ ಸಮ್ಮೇಳನ ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೈಸೂರು-ಕೊಡಗು ಬಿಜೆಪಿ ಸಂಸದ ಯದುವೀರ್ ಕೃಷ್ಟದತ್ತ(Yaduveer Krishnadatta Chamaraja Wadiyar) ಚಾಮರಾಜ ಒಡೆಯರ್ ಅವರು, ಚುನಾವಣೆಗೂ ಮೊದಲು ನನಗೆ ನಾನು ಯಾವ ಜಾತಿ ಎಂದೇ ಗೊತ್ತಿರಲಿಲ್ಲ. ಮೈಸೂರು(Mysore Empire) ರಾಜವಂಶಸ್ಥರು ಹಿಂದುಳಿದ ವರ್ಗದವರು ಎಂದರೆ ಜನರು ನಗುತ್ತಾರೆ. ಚುನಾವಣೆಯ ಸಂದರ್ಭದಲ್ಲಿಯೇ ನನಗೆ ಗೊತ್ತಾಗಿದ್ದು, ನಾನು ಹಿಂದುಳಿದ ವರ್ಗಗಳ ಅಭ್ಯರ್ಥಿ ಅಂತಾ ಹೇಳಿದರು.
ನನಗೆ ಎಲ್ಲ ಸಮುದಾಯವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿರುವುದು ಸೌಭಾಗ್ಯ. ಒಂದು ರೀತಿಯಲ್ಲಿ ಜಾತಿ ವ್ಯವಸ್ಥೆ ಒಳ್ಳೆಯದು. ಇನ್ನೊಂದು ರೀತಿಯಲ್ಲಿ ಶಾಪ. ಜಾತಿ ವ್ಯವಸ್ಥೆ ಮೂಲಕ ಭಾರತೀಯ ವೈವಿದ್ಯತೆಯನ್ನು ಸಂರಕ್ಷಣೆ ಮಾಡಬಹುದಾಗಿದೆ. ಆದರೆ, ಬೇರೆ ಬೇರೆ ಕಾರಣದಗಳಿಂದ ದುರುಪಯೋಗವಾಗುತ್ತಿರುವುದು ಶಾಪವಾಗಿದೆ. ಹೀಗಾಗಿ ಇದನ್ನು ಸರಿಯಾದ ದಾರಿಯಲ್ಲಿ ತೆಗೆದುಕೊಂಡು ಹೋಗುವುದು ಬಹಳ ಮುಖ್ಯವಾಗಿದೆ. ಇನ್ನು ಭಾರತೀಯರೆಲ್ಲ ಕನ್ನಡಿಗರಲ್ಲ. ಕನ್ನಡಿಗರೆಲ್ಲ ಭಾರತೀಯರು. ಈ ತತ್ವದಡಿ ನಾವು ಮುಂದುವರೆಯಬೇಕಿದೆ ಎಂದರು.