Ad imageAd image

ಮಿಸ್ಟರ್ ಯತ್ನಾಳ್ ವಕ್ಫ್ ಆಸ್ತಿ ನಿಮ್ಮ ಅಪ್ಪನದೂ ಅಲ್ಲ: ಸಚಿವ ಜಮೀರ್ ಅಹ್ಮದ್ ಖಾನ್

ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ನಮಗೆ ಒದಗಿಸಿದ ಸಂವಿಧಾನದಿಂದಲೇ ಇಂದು ನಾವು ಅತ್ಯಂತ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ.

Nagesh Talawar
ಮಿಸ್ಟರ್ ಯತ್ನಾಳ್ ವಕ್ಫ್ ಆಸ್ತಿ ನಿಮ್ಮ ಅಪ್ಪನದೂ ಅಲ್ಲ: ಸಚಿವ ಜಮೀರ್ ಅಹ್ಮದ್ ಖಾನ್
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijaypura): ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ನಮಗೆ ಒದಗಿಸಿದ ಸಂವಿಧಾನದಿಂದಲೇ ಇಂದು ನಾವು ಅತ್ಯಂತ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. ಪ್ರತಿಯೊಬ್ಬರಿಗೂ ತಮ್ಮ ಹಕ್ಕು ಪ್ರತಿಪಾದನೆಗೆ ಸಂವಿಧಾನ ಅವಕಾಶ ನೀಡಿದೆ. ವಕ್ಫ್ ಆಸ್ತಿ ಯಾವುದೇ ವೈಯಕ್ತಿಕ ಸ್ವತ್ತಲ್ಲ, ಇದು ದೇವರ ಆಸ್ತಿ. ಇದರ ಸಂರಕ್ಷಣೆ ನಮ್ಮ ಹಕ್ಕು ಹಾಗೂ ಜವಾಬ್ದಾರಿಯಾಗಿದೆ ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಬಿ.ಜೆಡ್.ಜಮೀರ್‌ಅಹ್ಮದ ಖಾನ್ ಹೇಳಿದರು. ಸೋಮವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ವಕ್ಫ್(Waqf Board) ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸಹಯೋಗದಲ್ಲಿ ಜಿಲ್ಲೆಯ ಮುತ್ತವಲ್ಲಿಗಳ ಸಮ್ಮೇಳನ ಹಾಗೂ ವಕ್ಫ್ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಕ್ಫ್ ಆಸ್ತಿ ಸಂರಕ್ಷಣೆ ಹಾಗೂ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಈವರೆಗೆ ರಾಜ್ಯದಾದ್ಯಂತೆ 10 ಜಿಲ್ಲೆಗಳಲ್ಲಿ ವಕ್ಫ್ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ವಿಜಯಪುರದಲ್ಲಿ 11ನೇ ಅದಾಲತ್ ಹಮ್ಮಿಕೊಳ್ಳಲಾಗಿದೆ. ಕಳೆದ 10-15 ವರ್ಷಗಳಿಂದ ಬಾಕಿ ಉಳಿದ ವಕ್ಫ್ ಖಾತೆ ಬದಲಾವಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ನಾನು ಸಚಿವನಾದ ಮೇಲೆ 727 ಖಾತೆ ಬದಲಾವಣೆಗೆ ಕ್ರಮ ವಹಿಸಲಾಗಿದೆ ಎಂದರು.

ಇನ್ನು ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್(Yatnal) ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮಿಸ್ಟರ್ ಯತ್ನಾಳ್ ವಕ್ಫ್ ಆಸ್ತಿ ನಿಮ್ಮ ಅಪ್ಪನದೂ ಅಲ್ಲ, ನಮ್ಮ ಅಪ್ಪನದೂ ಅಲ್ಲ. ಇದು ದಾನಕೊಟ್ಟವರ ಆಸ್ತಿಯಾಗಿದೆ. ಹೀಗಾಗಿ ಇದು ಯಾರ ವೈಯಕ್ತಿಕ ಆಸ್ತಿಯಲ್ಲ. ಇನ್ನು ಸರ್ಕಾರದ ಆಸ್ತಿಯನ್ನು ವಕ್ಫ್ ಅತಿಕ್ರಮಣ ಮಾಡಿಲ್ಲ. ವಕ್ಫ್ ಆಸ್ತಿ ಅಲ್ಲಾಹನ ಆಸ್ತಿ. ಇದರಲ್ಲಿ ಲಾಭ ಮಾಡುವ ಸ್ವಾರ್ಥ ತೋರಿಸಿದರೆ ಅಂತವರ ಬದುಕು ನಾಶವಾಗುತ್ತೆ. ಸಾವು ಸಹ ಅತ್ಯಂತ ಕಠಿಣವಾಗಿರುತ್ತೆ. ಹೀಗಾಗಿ ಇದನ್ನು ಸಂರಕ್ಷಿಸಿ ಕಾಲೇಜು, ಬಡವರಿಗೆ ಮನೆ ಸೇರಿದಂತೆ ಪ್ರತಿಯೊಬ್ಬ ಧರ್ಮೀಯರಿಗೂ ಇದರಿಂದ ಅನುಕೂಲವಾಗಬೇಕು ಅಂತಾ ಹೇಳಿದರು.

ವಿಜಯಪುರದ ಅದಾಲತ್ ನಲ್ಲಿ ವಕ್ಫ್ ಆಸ್ತಿಗಳ ಅತಿಕ್ರಮಣದ 17 ಅರ್ಜಿಗಳು, ಖಬರಸ್ಥಾನ್ (ಸ್ಮಶಾನ)ಕ್ಕೆ ಸಂಬಂಧಿಸಿದ್ದು, ಖಾತೆ ಬದಲಾವಣೆಯ 81 ಅರ್ಜಿಗಳು, ಸರ್ವೇ ಕಾರ್ಯಕ್ಕಾಗಿ 25 ಅರ್ಜಿಗಳು ಸೇರಿದಂತೆ ಒಟ್ಟು 330 ಅರ್ಜಿಗಳು ಸಲ್ಲಿಕೆಯಾಗಿವೆ. ಇಲ್ಲಿ ಸಲ್ಲಿಕೆಯಾದ ಅರ್ಜಿಗಳು ಯಾವುದೇ ಕಾರಣಕ್ಕೂ ವ್ಯರ್ಥವಾಗುವುದಿಲ್ಲ, ಪ್ರತಿಯೊಂದು ಅರ್ಜಿಗಳಿಗೂ ಸ್ಪಂದಿಸಲಾಗುವುದು. ಅಧಿಕಾರಿಗಳಿಗೆ ಒಂದು ತಿಂಗಳ ಕಾಲಾವಕಾಶ ಒದಗಿಸಿ ನಿಗದಿತ ಅವಧಿಯಲ್ಲಿಯೇ ಈ ಅರ್ಜಿಗಳ ಪರಿಹಾರಕ್ಕೆ ಕ್ರಮ ವಹಿಸಲಾಗುವುದು. ರಾಜ್ಯದಲ್ಲಿಯೇ ವಿಜಯಪುರದಲ್ಲಿ ಅತಿ ಹೆಚ್ಚು ವಕ್ಫ್ ಆಸ್ತಿ ಹೊಂದಿದೆ. ವಕ್ಫ್ ಆಸ್ತಿಯ ಸದ್ಭಳಕೆ ಮಾಡಿಕೊಂಡು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸೂರು ಕಲ್ಪಿಸುವ ಸದುದ್ದೇಶ ಹೊಂದಲಾಗಿದೆ.

ರಾಜ್ಯದಲ್ಲಿ ಒಟ್ಟು 1.12 ಲಕ್ಷ ಎಕರೆ ವಕ್ಫ್ ಆಸ್ತಿಯಲ್ಲಿ 85 ಸಾವಿರ ಎಕರೆ ಅತಿಕ್ರಮಣವಾಗಿ ಕೇವಲ 23 ಸಾವಿರ ಎಕರೆ ಮಾತ್ರ ಉಳಿದಿದೆ. ವಕ್ಫ್ ಆಸ್ತಿ ಕಬಳಿಕೆ, ಹಗರಣಕ್ಕೆ ಮುಂದಾಗಬಾರದು. ವಕ್ಫ್ ಆಸ್ತಿ ದೇವರ ಆಸ್ತಿ, ಇದರ ಸಂರಕ್ಷಣೆ ನಮ್ಮ ಜವಾಬ್ದಾರಿಯಾಗಿದ್ದು, ಪ್ರತಿಯೊಬ್ಬರು ವಕ್ಫ್ ಆಸ್ತಿ ಸಂರಕ್ಷಣೆಗೆ ಮುಂದಾಗಬೇಕು ಎಂದು ಅವರು ಕರೆ ನೀಡಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬರ್, ಸಿಂದಗಿ ಶಾಸಕ ಅಶೋಕ ಮನಗೂಳಿ, ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಅಧ್ಯಕ್ಷ ಅನ್ವರಬಾಶಾ ಅವರು ಮಾತನಾಡಿದರು. ಮೌಲಾನಾ ತನ್ವೀರ್ ಪೀರಾ ಹಾಸ್ಮೀ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕನ್ನಾನ್ ಮುಶ್ರೀಫ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article