ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ತಾಲೂಕಿನಾದ್ಯಂತ ಕಳೆದ ಎರಡ್ಮೂರು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಇದರಿಂದಾಗಿ ಜನರು ಅಕ್ಷರಶಃ ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಾಲೂಕಿನ ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಮನೆಗಳಿಗೆ ನೀರು ನುಗ್ಗಿವೆ. ಸಿಂದಗಿ ಮತಕ್ಷೇತ್ರದ ಆಲಮೇಲ ಭಾಗದ ಹಲವು ಗ್ರಾಮಗಳಿಗೆ ಭೀಮಾ ನದಿಯಿಂದ ಪ್ರವಾಹ ಉಂಟಾಗಿದೆ. ಹೀಗಾಗಿ ಜನರನ್ನು ನಿರಾಶ್ರಿತ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಕುಮಸಗಿ ಗ್ರಾಮಸ್ಥರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರಿಗೆ ನೆರವು ನೀಡುವ ಕೆಲಸವನ್ನು ಜನಪ್ರತಿನಿಧಿಗಳು ಮಾಡುತ್ತಿದ್ದಾರೆ.
ಇನ್ನು ಸಿಂದಗಿ ಪಟ್ಟಣದ ಬಹುತೇಕ ವಾರ್ಡ್ ಗಳಲ್ಲಿ ಸಾಕಷ್ಟು ಸಮಸ್ಯೆಯಾಗಿದೆ. ತಗ್ಗು ಪ್ರದೇಶ, ಕೊಳಗೇರಿ ಪ್ರದೇಶದ ಮನೆಗಳಿಗೆ ನೀರು ನುಗ್ಗಿವೆ. ವಾರ್ಡ್ ನಂಬರ್ 19ರ ಓಂ ನಗರದಲ್ಲಿ ಬರುವ ಕುಲ್ಕರ್ಣಿ ಲೇಔಟ್ ನಲ್ಲಿ ಚರಂಡಿ ವ್ಯವಸ್ಥೆಯಿಲ್ಲದ ಪರಿಣಾಮ ಎಲ್ಲೆಡೆ ನೀರು ತುಂಬಿಕೊಂಡಿದೆ. ಹೀಗಾಗಿ ಇಲ್ಲಿನ ನಿವಾಸಿಗಳು ವಾರ್ಡ್ ಸದಸ್ಯರು, ಅಧಿಕಾರಿಗಳ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಲೇಔಟ್ ಮಾಲೀಕರು ಚರಂಡಿ ವ್ಯವಸ್ಥೆ ಮಾಡದೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಇದೆ ರೀತಿ ವಾರ್ಡ್ 14ರ ಕರ್ನಾಟಕ ಬ್ಯಾಂಕ್ ಹಿಂದುಗಡೆ ಸಹ ನೀರು ತುಂಬಿಕೊಂಡಿದೆ. ಹೀಗೆ ಪಟ್ಟಣದ ಬಹುತೇಕ ಕಡೆ ಮಳೆನೀರು ನುಗ್ಗಿವೆ. ಸಿಂದಗಿ ಪುರಸಭೆ ಉಳಿದ ಸಂದರ್ಭದಲ್ಲಿ ಕೈಕಟ್ಟಿಕೊಂಡು ಇರುತ್ತೆ. ಮಳೆಗಾಲ ಶುರುವಾದ ಮೇಲೆ ಚರಂಡಿ ಎಲ್ಲಿವೆ ಎಂದು ಹುಡುಕೊಂಡು ಹೋಗುತ್ತಾರೆ. ಸಮಸ್ಯೆಯಾಗಿ ನೀರೆಲ್ಲ ಮನೆ, ಅಂಗಡಿಗಳಿಗೆ ನುಗ್ಗಿದ ಬಳಿಕ ಬಂದು ಸ್ವಚ್ಛಗೊಳಿಸಲು ಓಡಾಡುತ್ತಾರೆ ಎಂದು ಸಾರ್ವಜನಿಕರು ವಾಗ್ದಾಳಿ ನಡೆಸುತ್ತಿದ್ದಾರೆ.
ಮುಳಗಿದ ಗುರುದೇವ ಆಶ್ರಮ: ಎಪಿಎಂಸಿ ಆವರಣದಲ್ಲಿರುವ ಗುರುದೇವ ಆಶ್ರಮದೊಳಗೆ ಸಂಪೂರ್ಣವಾಗಿ ಸುತ್ತಲಿನ ನೀರು ನುಗ್ಗಿವೆ. ಮಠದ ಆವರಣ ಪೂರ್ತಿ ತುಂಬಿಕೊಂಡಿದೆ. ಅಲ್ಲದೆ ಪ್ರಾರ್ಥನೆ ಸೇರಿ ಧಾರ್ಮಿಕ ಕಾರ್ಯಗಳಿಗೆ ನಿರ್ಮಿಸಲಾಗಿದ್ದ ಕೆಳಮನೆಗೆ ನೀರು ನುಗ್ಗಿ ಅರ್ಧದಷ್ಟು ತುಂಬಿಕೊಂಡಿದೆ. ಹೀಗಾಗಿ ಮಠದ ಪೀಠಾಧ್ಯಕ್ಷರಾದ ಶ್ರೀ ಶಾಂತಗಂಗಾಧರ ಮಹಾಸ್ವಾಮಿಗಳು ಹಾಗೂ ಅವರೊಂದಗಿರುವ ಶಿಷ್ಯ ಬಳಗ ರಾತ್ರಿ ಇಡೀ ತೊಂದರೆ ಅನುಭವಿಸಿದೆ.
ಸಿಂದಗಿ ಪುರಸಭೆ 23 ವಾರ್ಡ್ ಗಳನ್ನು ಹೊಂದಿದೆ. ಬಹುತೇಕ ವಾರ್ಡ್ ಗಳು ಮಳೆಯಿಂದ ಹಾನಿಗೊಳಗಾಗಿವೆ. ಆಯಾ ವಾರ್ಡ್ ಸದಸ್ಯರುಗಳು ಅಲ್ಲಿನ ಜನರ ಸಮಸ್ಯೆ ಕೇಳದೆ ಕಾಣೆಯಾಗಿದ್ದಾರೆ ಎಂದು ಸಿಟ್ಟು ಹೊರ ಹಾಕುತ್ತಿದ್ದಾರೆ. ಚುನಾವಣೆಯಲ್ಲಿ ಗೆದ್ದು ಹೋದ ಮೇಲೆ ಮತ್ತೆ ಕಡೆ ಬಂದಿಲ್ಲ ಎನ್ನುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.
ಬಸ್ ಡಿಪೋ ಹಿಂದುಗಡೆ ಇರಬಹುದು, ಚಾಂದಕವಠೆ ರಸ್ತೆಯ ಪ್ರದೇಶ ಇರಬಹುದು. ಹೆಗ್ಗೇರೇಶ್ವರ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶ ಸೇರಿ ಅನೇಕ ಕಡೆ ನೀರು ತುಂಬಿಕೊಂಡಿವೆ. ವಿವೇಕಾನಂದ ವೃತ್ತ, ಬಸವೇಶ್ವರ ವೃತ್ತದ ರಸ್ತೆ, ಚನ್ನಮ್ಮ ವೃತ್ತರ ರಸ್ತೆ, ಪುರಸಭೆ ರಸ್ತೆ ಸೇರಿ ಎಲ್ಲೆಡೆ ತಗ್ಗು ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ಹರಸಾಹಸ ಪಡುತ್ತಿದ್ದಾರೆ. ಒಟ್ಟಿನಲ್ಲಿ ನಿರಂತರ ಮಳೆ ಜನರ ಬದುಕಿಗೆ ಪೆಟ್ಟು ಕೊಟ್ಟಿದೆ. ರೈತರು ಸಂಪೂರ್ಣವಾಗಿ ಬೆಳೆ ಹಾನಿಯ ತೊಂದರೆಗೆ ಒಳಗಾಗಿದ್ದಾರೆ.