ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಪುರಸಭೆಯಲ್ಲಿನ ಅವ್ಯವಸ್ಥೆ ನೋಡಿದರೆ ನಾನು ಇಷ್ಟು ದಿನ ಮಾಡಿರುವುದ ಏನೂ ಅಲ್ಲ. ಸಾರ್ವಜನಿಕರ ಆಸ್ತಿ ಸುರಕ್ಷಿತವಾಗಿಲ್ಲ ಎಂದು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಆತಂಕ ವ್ಯಕ್ತಪಡಿಸಿದರು. ಬುಧವಾರ 19 ಪೌರಕಾರ್ಮಿಕರಿಗೆ ಹಕ್ಕುಪತ್ರ ವಿತರಣೆ ಸಂದರ್ಭದಲ್ಲಿ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದರು. ಮುಖ್ಯಾಧಿಕಾರಿ ತನ್ನ ಲಾಗಿನ್ ಅನ್ನು ಖಾಸಗಿ ವ್ಯಕ್ತಿಗೆ ಕೊಡುತ್ತಾನೆ. ಆ ವ್ಯಕ್ತಿ ಪುರಸಭೆ ಸಿಬ್ಬಂದಿ ಶಿವಾಜಿ ಕೊಡಗೆ ಮಗನಾಗಿದ್ದು, ಇವನೆ ದಾಖಲೆಗಳನ್ನು ತೆಗೆದುಕೊಂಡು ಹೋಗುತ್ತಾನೆ ಎಂದು ಗಂಭೀರ ಆರೋಪ ಮಾಡಿದರು.
ಅಂದು ನಾನು ಮನೆಗೆ ಹೋದ ಸಂದರ್ಭದಲ್ಲಿ ಪೊಲೀಸರು ಬರಲಿಲ್ಲ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ. ಸುರೇಶ ನಾಯಕ ಮುಖ್ಯಾಧಿಕಾರಿ ಬಂದ ಮೇಲೆಯೇ ಇದೆಲ್ಲ ನಡೆದಿದೆ. ಸ್ವತಃ ಅವರೆ ಹೇಳಿದ್ದು ಲಾಗಿನ್ ನಾನೆ ಕೊಟ್ಟಿದ್ದು ಎಂದು. ಅಂದರೆ ಇಲ್ಲಿ ಬೇಲಿನೆ ಎದ್ದು ಹೊಲ ಮೇಯ್ದಂತೆ. ಸ್ಥಳೀಯ ಪೊಲೀಸರ ಮೇಲೆ ನನಗೆ ವಿಶ್ವಾಸವಿಲ್ಲ. ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಈ ಸಂಬಂಧ ದೂರು ನೀಡುತ್ತೇನೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮವಾಗದಿದ್ದರೆ ಏಕಾಂಗಿಯಾಗಿ ಪುರಸಭೆ ಮುಂದೆ ಧರಣಿ ಕುಳಿತುಕೊಳ್ಳುತ್ತೇನೆ ಎಂದರು.
ಈಗಾಗ್ಲೇ 29 ಪೌರ ಕಾರ್ಮಿಕರಿಗೆ ಹಕ್ಕುಪತ್ರ ನೀಡಲಾಗಿದೆ. ಉಳಿದ 19 ಪೌರಕಾರ್ಮಿಕರಿಗೆ ಇದೀಗ ಹಕ್ಕುಪತ್ರ ನೀಡಿದ್ದು, ಪಟ್ಟಣದ ಸರ್ವೇ ನಂಬರ್ 278ರಲ್ಲಿ 20X30 ಅಳತೆಯ ನಿವೇಶನವನ್ನು ನೀಡಲಾಗುತ್ತಿದೆ. ಅಲ್ಲಿ ಈಗಾಗ್ಲೇ ಅತಿಕ್ರಮಣ ಮಾಡಿಕೊಂಡಿರುವ ಜಾಗವನ್ನು ಮಾರ್ಚ್ 8ರೊಳಗೆ ತೆರವುಗೊಳಿಸಿ ಹಂಚಿಕೆ ಮಾಡಲಾಗುವುದು. – ಶಾಂತವೀರ ಬಿರಾದಾರ, ಪುರಸಭೆ ಅಧ್ಯಕ್ಷರು
ಇನ್ನು ಟಿಪ್ಪು ಸುಲ್ತಾನ್ ವೃತ್ತದ ಹತ್ತಿರ ಪುರಸಭೆ ಜಾಗವನ್ನು ಅತಿಕ್ರಮಣ ಮಾಡಿಕೊಂಡು, ಬೋಗಸ್ ಉತಾರಿಗಳನ್ನು ಮಾಡಿಕೊಂಡು ಬಹುಮಹಡಿ ಕಟ್ಟಡ ಕಟ್ಟಲಾಗಿದೆ. ಅವುಗಳ ಉತಾರಿಯನ್ನು ರದ್ದು ಮಾಡುವ ಸಂಬಂಧ ಈಗಾಗ್ಲೇ ಠರಾವು ಮಾಡಲಾಗಿದೆ. ಅಲ್ಲಿನ ಅತಿಕ್ರಮಣ ಕಟ್ಟಡಗಳು, ಗೂಡಂಗಡಿಗಳನ್ನು ಮಾರ್ಚ್ 8ರಂದು ಪುರಸಭೆ ವಶಕ್ಕೆ ಪಡೆಯಲಾಗುವುದು. ತೆರವುಗೊಳಿಸಿದ ಜಾಗದ ಅಭಿವೃದ್ಧಿ ಇನ್ನು ಯಾಕೆ ಆಗುತ್ತಿಲ್ಲ ಎನ್ನುವ ಮಾಧ್ಯಮದವರ ಪ್ರಶ್ನೆಗೆ, ಎಸ್ಎಫ್ ಸಿ ಅನುದಾನದಡಿ 2 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಶಾಸಕರ ಸೂಚನೆಯ ಮೇರೆಗೆ ನೂತನ ಆಡಳಿತಸೌಧದ ಕಾಂಪೌಂಡ್ ನಿರ್ಮಾಣಕ್ಕೆ 1 ಕೋಟಿ ರೂಪಾಯಿ ಮೀಸಲಿಡಲಾಗಿದೆ. 1 ಕೋಟಿ ರೂಪಾಯಿಯಲ್ಲಿ ಅಭಿವೃದ್ಧಿ ಕೆಲಸ ಟೆಂಡರ್ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
