ಪ್ರಜಾಸ್ತ್ರ ಸುದ್ದಿ
ಕಲಬುರಗಿ(Kalaburagi): ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು ಅನ್ನೋ ಕಾರಣಕ್ಕೆ ತಂದೆ ಹಾಗೂ ಸಂಬಂಧಿಕರು ಕೂಡಿಕೊಂಡು ಯುವತಿಯನ್ನು ಹತ್ಯೆ ಮಾಡಿದ ಘಟನೆ ಮೇಳಕುಂದಾ.ಬಿ ಗ್ರಾಮದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಕವಿತಾ ಕೊಳ್ಳೂರ(18) ಕೊಲೆಯಾದ ಯುವತಿ ಎಂದು ತಿಳಿದು ಬಂದಿದೆ. ಯುವತಿಯ ತಂದೆ ಶಂಕರ, ಸಂಬಂಧಿಕರಾದ ದತ್ತು ಚೋಳಾಭರ್ಧಿ, ಶರಣು ಎಂಬುವರ ಮೇಲೆ ಕೊಲೆ ಆರೋಪ ಕೇಳಿ ಬಂದಿದೆ.
ಕಲಬುರಗಿಯಲ್ಲಿ ಪಿಯುಸಿ ಓದುತ್ತಿದ್ದ ಕವಿತಾ, ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು ಎಂದು ತಿಳಿದು ಬಂದಿದೆ. ಆಗ ಕುಟುಂಬಸ್ಥರು ಕಾಲೇಜು ಬಿಡಿಸಿ ಊರಿಗೆ ಕರೆದುಕೊಂಡು ಬಂದಿದ್ದರಂತೆ. ಯುವತಿ ಅದೆ ಯುವಕನೊಂದಿಗೆ ಮದುವೆ ಮಾಡಿಕೊಡಿ ಎಂದು ಹಠ ಹಿಡಿದಿದ್ದಳಂತೆ. ಮಧ್ಯರಾತ್ರಿ ಯುವತಿಯ ಕತ್ತು ಹಿಸುಕಿ ಕೊಲೆ ಮಾಡಿ, ಕೀಟನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಿದ್ದರಂತೆ.
ಮುಂಜಾನೆ ದೇಹವನ್ನು ಊರು ಹೊರವಲಯದ ಜಮೀನಿನಲ್ಲಿ ಅಗ್ನಿಸ್ಪರ್ಶದ ಮೂಲಕ ಅಂತ್ಯಕ್ರಿಯೆ ನಡೆಸಿದ್ದಾರಂತೆ. ಈ ಬಗ್ಗೆ ಅನುಮಾನ ಮೂಡಿದೆ. ಫರಹತಾಬಾದ್ ಠಾಣೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಿದಾಗ ಕೊಲೆ ವಿಷಯ ಬೆಳಕಿಗೆ ಬಂದಿದೆ. ಮೂಳೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಕ್ಕೆ ಕಳಿಸಲಾಗಿದ್ದು, ಯುವತಿಯ ಕುಟುಂಬಸ್ಥರನ್ನು ವಶಕ್ಕೆ ಪಡೆಯಲಾಗಿದೆ.