ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಶಾಲಾ ಶೈಕ್ಷಣಿಕ ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ಬಂದ ಸಂದರ್ಭದಲ್ಲಿ ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲಾಗಿ ಮೃತಪಟ್ಟ ಘಟನೆ ಸಂಬಂಧ, ಶಿಕ್ಷಣ ಇಲಾಖೆ ಇದೀಗ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ. ಈ ವರ್ಷದ ಶಾಲಾ ಶೈಕ್ಷಣಿಕ ಪ್ರವಾಸಗಳನ್ನು ರದ್ದುಗೊಳಿಸಿ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಈಗಾಗಲೇ ಪ್ರವಾಸ ಕೈಗೊಂಡ ಶಾಲೆಗಳು ಅರ್ಧಕ್ಕೆ ವಾಪಸ್ ಬರಬೇಕು ಎಂದು ಆದೇಶ ಹೊರಡಿಸಿದ್ದಾರೆ.
ಶಿಕ್ಷಣ ಇಲಾಖೆ ನಿರ್ದೇಶಕರ ಹೊರಡಿಸಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಹೀಗಾಗಿ ಆಯಾ ಜಿಲ್ಲೆ ಹಾಗೂ ತಾಲೂಕು ವ್ಯಾಪ್ತಿಯಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಕುರಿತು ಗಮನ ಹರಿಸಬೇಕಿದ್ದು, ಈಗಾಗ್ಲೇ ಅನುಮತಿ ಪಡೆದ ಪ್ರವಾಸವನ್ನು ರದ್ದುಗೊಳಿಸಬೇಕು. ಪ್ರವಾಸಕ್ಕೆ ಹೋದವರು ವಾಪಸ್ ಊರುಗಳಿಗೆ ಬರಬೇಕು ಎಂದು ತಿಳಿಸಲಾಗಿದೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಮೂರಾರ್ಜಿ ದೇಸಾಯಿ ವಸತಿ ಶಾಲೆಯಿಂದ ಹಮ್ಮಿಕೊಂಡಿದ್ದ ಪ್ರವಾಸದ ವೇಳೆ ಭಾನುವಾರ ನಾಲ್ವರು ವಿದ್ಯಾರ್ಥಿನಿಯರು ಮುರುಡೇಶ್ವರಲ್ಲಿ ನೀರುಪಾಲಾಗಿದ್ದರು. ಓರ್ವ ವಿದ್ಯಾರ್ಥಿ ಮೃತದೇಹ ಅದೇ ದಿನ ಸಂಜೆ ಪತ್ತೆಯಾದರೆ, ಉಳಿದ ಮೂವರು ವಿದ್ಯಾರ್ಥಿನಿಯರ ಮೃತದೇಹ ಮರುದಿನ ಪತ್ತೆಯಾಗಿದೆ. ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಹೇಳತೀರದು. ಘಟನೆ ಸಂಬಂಧ ಶಾಲೆಯ ಪ್ರಾಂಸುಪಾಲರನ್ನು ಅಮಾನತುಗೊಳಿಸಲಾಗಿದೆ. ಹಾಗೂ ಅತಿಥಿ ಶಿಕ್ಷಕರನ್ನು ವಜಾ ಮಾಡಲಾಗಿದೆ.