ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಐದ ದಿನದ ಗಣೇಶ ವಿಸರ್ಜನೆಯ ಮೆರವಣಿಗೆ ವೇಳೆ ಬುಧವಾರ ಸಂಜೆ ಮಂಡ್ಯ ಜಿಲ್ಲೆಯ ನಾಗಮಂಗಲದ(Nagamangala) ಮೈಸೂರು ರಸ್ತೆಯ ದರ್ಗಾ ಬಳಿ ಕಲ್ಲು ತೂರಾಟ ನಡೆಸಲಾಗಿದೆ. ಈ ಘಟನೆ ಸಂಬಂಧ ಇದುವರೆಗೂ 52 ಜನರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ಈ ಬಗ್ಗೆ ಗುರುವಾರ ಮಾತನಾಡಿದ ಅವರು, ಎಲ್ಲ ರೀತಿಯ ಭದ್ರತೆಯನ್ನು ಮಾಡಲಾಗಿತ್ತು. ಪೊಲೀಸ್ ತುಕಡಿಯನ್ನು ಸಹ ನಿಯೋಜಿಸಲಾಗಿತ್ತು. ಇಲ್ಲದಿದ್ದರೆ ಹೆಚ್ಚಿನ ಗಲಾಟೆ ಆಗುತ್ತಿತ್ತು ಅಂತಾ ಹೇಳಿದ್ದಾರೆ.
ಮೇಲ್ನೋಟಕ್ಕೆ ಇದು ರಾಜಕೀಯ ಪ್ರೇರಿತವಾಗಿ ಕಾಣಿಸುತ್ತಿಲ್ಲ. ಈ ಬಗ್ಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ. ಎಡಿಜಿಪಿ(ADGP) ಮಟ್ಟದ ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದಾರೆ. ಒಬ್ಬರಿಗೊಬ್ಬರು ಗಲಾಟೆ ಮಾಡಿಕೊಂಡಿದ್ದಾರೆ. ಇದು ಕೋಮು ಗಲಭೆ ಎನ್ನಲು ಆಗುವುದಿಲ್ಲ. ಇದಕ್ಕೆ ನೀವು ಹೆಚ್ಚು ಪ್ರಚಾರ ಕೊಡಬೇಡಿ ಎಂದು ಮಾಧ್ಯಮದವರ ಹತ್ತಿರ ಮನವಿ ಮಾಡಿದರು. ಇದನ್ನು ರಾಜಕೀಯ ಮಾಡಬೇಡಿ ಎಂದು ಬಿಜೆಪಿಯವರ ಬಳಿಯೂ ಮನವಿ ಮಾಡುತ್ತೇನೆ. ಇದನ್ನು ಪೊಲೀಸರಿಗೆ ಬಿಡಿ. ಅವರು ನೋಡಿಕೊಳ್ಳುತ್ತಾರೆ ಎಂದರು.