Ad imageAd image

ಕಲ್ಲು, ಕಟ್ಟಿಗೆಗೆ ಶಿಲೆಯ ರೂಪ ಕೊಟ್ಟ ‘ಶಿಲ್ಪಿ’ಗೆ ರಾಷ್ಟ್ರ ಪ್ರಶಸ್ತಿ…

Nagesh Talawar
ಕಲ್ಲು, ಕಟ್ಟಿಗೆಗೆ ಶಿಲೆಯ ರೂಪ ಕೊಟ್ಟ ‘ಶಿಲ್ಪಿ’ಗೆ ರಾಷ್ಟ್ರ ಪ್ರಶಸ್ತಿ…
WhatsApp Group Join Now
Telegram Group Join Now

ವಿಶೇಷ ಲೇಖನ, ಚಂದ್ರಕಾಂತ ಸೊನ್ನದ, ಸಾಕ್ಷ್ಯಚಿತ್ರ ನಿರ್ದೇಶಕರು, ಬೆಂಗಳೂರು

ಈ ಪ್ರಕೃತಿಯೇ ಒಂದು ವಿಚಿತ್ರ ವಿಸ್ಮಯ. ಇಲ್ಲಿ ಹುಟ್ಟಿದ ಪಶು ಪಕ್ಷಿ ಪ್ರಾಣಿಗಳು ಜೊತೆ ಮನುಷ್ಯ ಕೂಡಾ ಬದುಕಬೇಕು. ಬದುಕಲು ಹೋರಾಟ ಮಾಡಬೇಕು. ಇಂತಹ ಬದುಕು ರೂಪಿಸಿಕೊಂಡು ಹಲವರು ಹಲವಾರು ಸಾಧನೆ ಮಾಡಿದ್ದಾರೆ. ಅಂತಹ ಸಾಧಕರೊಬ್ಬರ ಬಗೆಗೆ ಈ ಒಂದು ಲೇಖನ.

ಬದುಕು ಕಟ್ಟಿಕೊಳ್ಳಲು ಹುಟ್ಟಿದ ಊರು ಬಿಟ್ಟು ಮತ್ತೊಂದು ಊರಿನತ್ತ ಹೊರಟ ಯುವಕನೊಬ್ಬ, ಗುರುವಿನ ನೆಚ್ಚಿನ ಶಿಷ್ಯನಾಗಿ ಸತತ ಪರಿಶ್ರಮದ ಪರಿಣಾಮ ಇಂದು ರಾಷ್ಟ್ರ ಪ್ರಶಸ್ತಿ ಮುಡಿಗೇರುವ ಮಟ್ಟಕ್ಕೆ ಸಾಗಿ ಬಂದಿದೆ. ಇಂತಹ ಸಾಧನೆ ಮಾಡಿದ್ದು ಕಲಬುರಗಿಯ ಚಂದ್ರಶೇಖರ ಶಿಲ್ಪಿ(71). ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಕಕ್ಕೇರಾ ಗ್ರಾಮದ ಇವರು ಬಡತನದಲ್ಲಿ ಮಿಂದೆದ್ದವರು. ಯಮನಪ್ಪ ಹಾಗೂ ಅಂಬ್ರಮ್ಮ ದಂಪತಿಯ ಮಗನಾದ ಚಂದ್ರಶೇಖರ ಶಿಲ್ಲಿ, ಕಾಪ್ಟ(ಕಟ್ಟಿಗೆ ಕಲೆ) ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.

ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ. ಶಾಲೆಯ ಶುಲ್ಕವನ್ನು ಸಹ ಕಟ್ಟಲಾಗದ ಪರಿಸ್ಥಿತಿ. ಇವರಿಗೆ ವಿದ್ಯೆ ಕಲಿಸಿದ ಗುರುಲಿಂಗಯ್ಯ ಹಿರೇಮಠ ಅವರೆ ಶಾಲೆಯ ಶುಲ್ಕವನ್ನು ಕಟ್ಟುತ್ತಾರೆ. 6ನೇ ತರಗತಿವರೆಗೆ ಓದಿದ ಇವರಿಗೆ ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಪರಿಸ್ಥಿತಿ ಇರಲಿಲ್ಲ. ಹೀಗಾಗಿ ಮುಂದೆ ಏನು ಅನ್ನೋ ಪ್ರಶ್ನೆ ಎದುರಾಗುತ್ತೆ. ಆಗ ಕಕ್ಕೇರಾದಿಂದ 12 ಕಿಲೋ ಮೀಟರ್ ದೂರದಲ್ಲಿರುವ ಗೋನಾಲದಲ್ಲಿರುವ ನಾಗಣ್ಣ ಬಡಿಗೇರ ಅವರ ಬಳಿ ಸೇರಿಕೊಳ್ಳುತ್ತಾರೆ. ಶಿಲ್ಪಕಲೆ ವಿದ್ಯೆಯನ್ನು ಕಲಿಸಿಕೊಡುತ್ತಾರೆ. ಸತತ 18 ವರ್ಷಗಳ ಕಾಲ ಗುರುವಿನ ಹತ್ತಿರ ಅಧ್ಯಯನ ಮಾಡುತ್ತಾರೆ.

ಚಂದ್ರಶೇಖರ ಶಿಲ್ಪಿ ಅವರ ನಡೆ, ನುಡಿಗೆ ಮೆಚ್ಚಿದ ಗುರುಗಳು ಸ್ವತಃ ತಮ್ಮ ಮಗಳನ್ನು ಕೊಟ್ಟು ಮದುವೆ ಸಹ ಮಾಡುತ್ತಾರೆ. ಬೇಲರೂ, ಹಳೇಬೀಡು, ಶಿರವಾಳ, ಕಾಳಗಿ ಸೇರಿದಂತೆ ಅನೇಕ ಕಡೆ ಭೇಟಿ ಅಲ್ಲಿನ ಶಿಲ್ಪಕಲೆಯನ್ನು ನೋಡಿ ಅಧ್ಯಯನ ಮಾಡುತ್ತಾರೆ. ಮುಂದೆ ಕಲ್ಲು, ಪಂಚಲೋಹದ ಕೆತ್ತನೆಯಲ್ಲಿ ಗುರಪ್ಪ ಸಾಧು ಅವರು ಗುರುಗಳಾಗಿ ಕಲಿಸುತ್ತಾರೆ. ಸಾಕಷ್ಟು ತಾಳ್ಮೆಯಿಂದ ಎಲ್ಲವನ್ನು ಕಲಿಯುತ್ತಲೇ ಸಾಧಿಸುತ್ತಾ ಹೋಗುತ್ತಾರೆ. ಹೀಗಾಗಿ ಇಂದು ನಾಡಿನ ವಿವಿಧ ಕಡೆ ಇವರು ಕಟ್ಟಿಗೆ, ಕಲ್ಲು, ಪಂಚಲೋಹದಲ್ಲಿ ಕೆತ್ತನೆ ಮಾಡಿದ ಅದ್ಭುತ ಶಿಲ್ಪಕಲೆಗಳಿವೆ.

ಇವರು ನಿರ್ಮಿಸುವ ದ್ವಾರಬಾಗಿಲು ನೋಡಿದರೆ ರೋಮಾಂಚನವಾಗುತ್ತೆ. ಅಲ್ಲಿರುವ ಕೆತ್ತನೆ ನೋಡಿದರೆ ಇವರ ಕಲೆ ಎಂತಹದ್ದು ಅನ್ನೋದು ತಿಳಿಯುತ್ತೆ. ಒಂದು ದ್ವಾರಬಾಗಿಲು ಮಾಡಲು ಎರಡು ವರ್ಷ ತೆಗೆದುಕೊಳ್ಳುತ್ತೆ ಅಂತಾರೆ. ಸುಮಾರು 40 ಲಕ್ಷದ ತನಕ ಇವರು ತಯಾರಿಸಿದ ದ್ವಾರಬಾಗಿಲು ಮಾರಾಟವಾಗಿದೆಯಂತೆ. ರಾಜ್ಯ ಮಾತ್ರವಲ್ಲ ವಿದೇಶಕ್ಕೂ ಇವರ ಕಲೆ ಸಾಗಿದೆ. 71 ವರ್ಷದ ಚಂದ್ರಶೇಖರ ಶಿಲ್ಪಿ ಅವರ ಬಳಿ ಅನೇಕರು ಅಭ್ಯಾಸ ಮಾಡಿದ್ದಾರೆ, ಮಾಡುತ್ತಿದ್ದಾರೆ. ಹೈಸ್ಕೂಲ್ ಮೆಟ್ಟಿಲು ಸಹ ಹತ್ತದ ವ್ಯಕ್ತಿಯೊಬ್ಬರು ತಮ್ಮ ಕಲೆಯ ಮೂಲಕವೇ ರಾಷ್ಟ್ರ ಪ್ರಶಸ್ತಿಯನ್ನು ಪಡೆಯುತ್ತಾರೆ ಅಂದರೆ ನಿಜಕ್ಕೂ ಶ್ರೇಷ್ಠ ಸಾಧನೆ. ಕೇಂದ್ರ ಸರ್ಕಾರದ ಜವಳಿ ಮಂತ್ರಾಲಯದ ಕರಕುಶಲ ವಿಭಾಗ ನೀಡುವ 2024ನೇ ಸಾಲಿನ ರಾಷ್ಟ್ರ ಪ್ರಶಸ್ತಿಯನ್ನು ಡಿಸೆಂಬರ್ 9ರಂದು ದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪಡೆದಿದ್ದಾರೆ. ಇಂತಹ ಸಾಧಕರನ್ನು ಸರಕಾರ ಗುರುತಿಸಿ ಸಹಕರಿಸಬೇಕಾಗಿದೆ. ಹಾಗಾದಾಗ ಮಾತ್ರ ಇಂತಹ ಕಲೆಯನ್ನು ಕಲಾವಿದರನ್ನು ಉಳಿಸಬಹುದಾಗಿದೆ.

WhatsApp Group Join Now
Telegram Group Join Now
Share This Article