ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯಾದ್ಯಂತ ಇರುವ ಎಲ್ಲ ಅಧೀನ ನ್ಯಾಯಾಲಯಗಳಲ್ಲಿ ಡಿಸೆಂಬರ್ 14ರಂದು ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಲಾಗಿದ್ದು, ಈ ಅದಾಲತನಲ್ಲಿ ಕಕ್ಷಿದಾರರು ಭಾಗವಹಿಸಿ, ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಕ್ಕೆ ಅವಕಾಶವಿರುವುದರಿಂದ ಈ ಅದಾಲತ್ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶಿವಾಜಿ ಅನಂತ ನಲವಾಡೆ ಅವರು ತಿಳಿಸಿದರು.
ಶುಕ್ರವಾರ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ ಎಡಿಆರ್ ಕಟ್ಟಡದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ರಾಜಿಗೆ ಒಳಪಡಬಹುದಾದ ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನು, ಚೆಕ್ ಬೌನ್ಸ್ ಪ್ರಕರಣಗಳು, ಮೋಟಾರು ವಾಹನ ಅಪಘಾತದಲ್ಲಿ ಪರಿಹಾರ ಕೋರಿ ಸಲ್ಲಿಸಿರುವ ಪ್ರಕರಣಗಳು, ವಿಚ್ಛೇದನವನ್ನು ಹೊರತುಪಡಿಸಿ ಇರುವ ಕೌಟುಂಬಿಕ ವ್ಯಾಜ್ಯಗಳು, ಆಸ್ತಿಯಲ್ಲಿ ವಿಭಾಗ ಕೋರಿರುವ ದಾವೆಗಳು ಹಾಗೂ ದೂರವಾಣಿ ಬಾಕಿ ಬಿಲ್ಲುಗಳ ಪಾವತಿ ಪ್ರಕರಣಗಳು, ನೀರಿನ ಬಿಲ್ ಪಾವತಿ ಪ್ರಕರಣಗಳು, ಜೀವನಾಂಶ ಕೋರಿರುವ ಪ್ರಕರಣಗಳು, ಕಾರ್ಮಿಕ ವ್ಯಾಜ್ಯಗಳು, ಭೂ-ಸ್ವಾಧೀನ ಪ್ರಕರಣಗಳು, ಕಂದಾಯ ಪ್ರಕರಣಗಳು, ಸಾಲ ವಸೂಲಾತಿ ಪ್ರಕರಣಗಳು, ಬ್ಯಾಂಕ್ ವ್ಯಾಜ್ಯಗಳು ಹಾಗೂ ಇತರೆ ಸಿವಿಲ್ ಪ್ರಕರಣಗಳನ್ನು ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದರು.
ಜಿಲ್ಲೆಯಲ್ಲಿ ಡಿಸೆಂಬರ್ 14ರಂದು ಜರುಗುವ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಕಕ್ಷಿದಾರರು ತಮ್ಮ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಂಡು ನೆಮ್ಮದಿಯ ಜೀವನಕ್ಕೆ ನಾಂದಿ ಹಾಡಲು ಸುವರ್ಣಾವಕಾಶ ಕಲ್ಪಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಹೇಳಿದರು. ಈ ವೇಳೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನುನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಅರವಿಂದ. ಎಸ್. ಹಾಗರಗಿ, ಜಿಲ್ಲಾ ನ್ಯಾಯಾವಾದಿಗಳ ಸಂಘದ ಅಧ್ಯಕ್ಷರಾದ ಡಿ.ಜಿ. ಬಿರಾದಾರ, ಜಿಲ್ಲಾ ನ್ಯಾಯಾವಾದಿಗಳ ಸಂಘದ ಕಾರ್ಯದರ್ಶಿಗಳಾದ ಎಸ್.ಎಸ್. ಚೂರಿ ಉಪಸ್ಥಿತರಿದ್ದರು.