ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ(Hubballi): ನಗರದ ಕಾಲೇಜು ಮೈದಾನದಲ್ಲಿ ಎಂಸಿಎ ಪದವಿ ವಿದ್ಯಾರ್ಥಿ ನೇಹಾ(Neha Hiremath) ಹಿರೇಮಠ ಎನ್ನುವ ವಿದ್ಯಾರ್ಥಿಯನ್ನು ಫಯಾಜ್ ಎನ್ನುವ ಯುವಕ ಪ್ರೀತಿಯ ಕಾರಣಕ್ಕೆ ಕೊಲೆ ಮಾಡಿದ ಘಟನೆ ಕಳೆದ ಏಪ್ರಿಲ್ 18ರಂದು ನಡೆದಿದೆ. ಇದು ರಾಜ್ಯವಲ್ಲ, ರಾಷ್ಟ್ರಮಟ್ಟದಲ್ಲಿ ಚರ್ಚೆ ಆಯ್ತು. ಸ್ವತಃ ಪ್ರಧಾನಿ ಮೋದಿ(Modi) ಸಹ ಕರ್ನಾಟಕದ ಚುನಾವಣೆ ಸಂದರ್ಭದಲ್ಲಿ ಪ್ರಸ್ತಾಪಿಸಿದರು. ಈ ಪ್ರಕರಣದ ತನಿಖೆ ಏನಾಗಿದೆ? ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಪೊಲೀಸರು ಸಲ್ಲಿಸಿದ್ದಾರಾ? ಏನೆಲ್ಲ ಬೆಳವಣಿಗೆ ಆಗಿದೆ ಎನ್ನುವುದರ ಕುರಿತು ಮಾಧ್ಯಮಗೋಷ್ಠಿ ನಡೆಸಿ ತಿಳಿಸುವ ಪ್ರಯತ್ನವಾಗಿಲ್ಲ.
ಇನ್ನು ಮೇ 15ರಂದು ವೀರಾಪೂರ ಓಣಿಯಲ್ಲಿ ಕಡುಬಡತನದಲ್ಲಿರುವ ಅಂಜಲಿ(Anjali Ambigera) ಅಂಬಿಗೇರ ಎನ್ನುವ ಯುವತಿಯನ್ನು ಸಹ ಪ್ರೀತಿಯ ಕಾರಣಕ್ಕೆ ಗಿರೀಶ್ ಸಾವಂತ್ ಎಂಬಾತ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಕೊಲೆ ಮಾಡಿದ. ನೇಹಾ ಹಿರಮೇಠಳನ್ನು ಕಾಲೇಜು ಮೈದಾನದಲ್ಲಿಯೇ ಚಾಕುವಿನಿಂದ ಸುಮಾರು 14 ಬಾರಿ ಇರಿದು ಕೊಂದರೆ, ಅಂಜಲಿ ಅಂಬಿಗೇರಳನ್ನು ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಕೊಲೆ ಮಾಡಲಾಯಿತು. ಇದರ ತನಿಖೆ ಎಲ್ಲಿಗೆ ಇದೆ ಎನ್ನುವುದು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಇಲ್ಲ. ಯಾಕಂದರೆ ಈ ಎರಡು ಪ್ರಕರಣದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದವು. ಬಹುದೊಡ್ಡ ರಾಜಕೀಯ ಮೇಲಾಟಗಳಿಗೆ ಕಾರಣವಾದವು. ಆದರೆ, ಎರಡು ಅಮಾಯಕ ಜೀವಗಳಿಗೆ ನ್ಯಾಯ ಸಿಕ್ಕಿತಾ ಎನ್ನುವುದು ಯಾರಿಗೂ ತಿಳಿದಿಲ್ಲ.
ಧರ್ಮಸ್ಥಳದಲ್ಲಿ ದಶಕಗಳ ಹಿಂದೆ ನಡೆದ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಅಪರಾಧಿಗಳು ಯಾರು ಎನ್ನುವುದು ಇದುವರೆಗೂ ತಿಳಿದಿಲ್ಲ. ಈ ಬಗ್ಗೆ ಹೋರಾಟಗಳು ನಡೆಯುತ್ತಲೇ ಇವೆ. ಸರ್ಕಾರಗಳು ಬದಲಾಗುತ್ತಿವೆ. ಅಧಿಕಾರಿಗಳು ಬದಲಾಗುತ್ತಿದ್ದಾರೆ. ಆದರೆ, ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಗುವುದು ಅನುಮಾನ. ಇಂತಹ ಅದೆಷ್ಟೋ ಅಮಾಯಕರು ತಮ್ಮವರನ್ನು ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಲೇ ಇದ್ದು, ನಿಜವಾದ ಅಪರಾಧಿಗಳನ್ನು ಪತ್ತೆ ಮಾಡಿ ಶಿಕ್ಷೆ ಕೊಡಿಸಲು ಆಗದೆ ಇರುವುದು ನಿಜಕ್ಕೂ ನೋವಿನ ಸಂಗತಿ.
ನೇಹಾ, ಅಂಜಲಿ ಕುಟುಂಬ ಇವತ್ತಿಗೂ ನ್ಯಾಯದ ನಿರೀಕ್ಷೆಯಲ್ಲಿದೆ. ಪೊಲೀಸ್ ತನಿಖಾ ತಂಡಗಳು ಏನು ಮಾಡುತ್ತಿವೆ. ತನಿಖೆಯ ಬೆಳವಣಿಗೆ ಮಾಹಿತಿಯನ್ನು ಯಾಕೆ ಮಾಧ್ಯಮಗಳ ಎದುರು ಹಂಚಿಕೊಳ್ಳುತ್ತಿಲ್ಲ. ಕೊಲೆ ಆರೋಪಿಗಳ ಯಾವ ಜೈಲಿನಲ್ಲಿದ್ದಾರೆ. ಆರೋಪ ಸಾಬೀತಾಯ್ತಾ? ಹಾಡಹಗಲೆ ಸಾರ್ವಜನಿಕರ ಎದುರೆ ನಡೆದ ಎರಡು ಕೊಲೆಗಳ(Murder Case) ಪ್ರಕರಣಕ್ಕೆ ನ್ಯಾಯ ಸಿಗುವುದು ಯಾವಾಗ ಎನ್ನುವ ಪ್ರಶ್ನೆ ಮೂಡಿದೆ. ನಟ ದರ್ಶನ್(Darshan) ಹಾಗೂ ಆಪ್ತ ಗೆಳತಿ ಪವಿತ್ರಾಗೌಡ ಪ್ರಕರಣ ಹೈಪ್ರೊಫೈಲ್ ಎನ್ನುವ ಕಾರಣಕ್ಕೆ 3 ತಿಂಗಳು ಕಳೆಯುವುದರೊಳಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಬರೋಬ್ಬರಿ 3991 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಅದೇ ರೀತಿ ಇಲ್ಲಿಯೂ ಎರಡು ಅಮಾಯಕ ಜೀವಗಳನ್ನು ಕಳೆದುಕೊಂಡ ಕುಟುಂಬಸ್ಥರು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ಅದೇನಾಯ್ತು ಎಂದು ಕೇಳುವ ಹಕ್ಕು ಅವರಿಗೂ ಇದೆ. ಈ ಬಗ್ಗೆ ಸರ್ಕಾರ, ಪೊಲೀಸರು ಆದಷ್ಟು ಬೇಗ ಮಾಹಿತಿ ಕೊಡುವ ಕೆಲಸ ಮಾಡಬೇಕು.