ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ಅರ್ಪಿಸಿದ ಮಹಾನ್ ವೀರ ಅಂದರೆ ಅದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು. ಅವರ ಜಯಂತಿಯನ್ನು ಸರ್ಕಾರದಿಂದಲೇ ಆಚರಿಸಬೇಕು. ಪ್ರತಿ ತಾಲೂಕು, ಜಿಲ್ಲಾ ಕಚೇರಿಗಳಲ್ಲಿ ಕಡ್ಡಾಯವಾಗಿ ನೇತಾಜಿ ಜಯಂತಿ ಆಚರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಉತ್ತರ ವಲಯ ಅಧ್ಯಕ್ಷ ಬಸನಗೌಡ ಧರ್ಮಗೊಂಡ ಹೇಳಿದರು. ಪಟ್ಟಣದ ಎಪಿಎಂಸಿ ಕಾರ್ಯಾಲಯದಲ್ಲಿ ಸಂಘದಿಂದ ಸುಭಾಷ್ ಚಂದ್ರ ಬೋಸ್ ಅವರು 128ನೇ ಜಯಂತಿ ಆಚರಿಸಿ ಗೌರವ ಸಲ್ಲಿಸಲಾಯಿತು.

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧೀಜಿ ಜೊತೆ ಕೂಡಿ ಹೋರಾಡಿದರು. ಮುಂದೆ ತಮ್ಮದೆಯಾದ ಸೈನ್ಯ ಕಟ್ಟಿ ವಿದೇಶದಿಂದಲೇ ಹೋರಾಟದ ಕಿಚ್ಚು ಹಚ್ಚಿದರು. ಒನಕೆ ಓಬವ್ವ, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣನಂತೆ ದೇಶಕ್ಕಾಗಿ ಪ್ರಾಣ ಅರ್ಪಿಸಿದ್ದಾರೆ. ಇವರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಬೇಕು ಹಾಗೂ ಸರ್ಕಾರದ ವತಿಯಿಂದ ಜಯಂತಿ ಆಚರಣೆ ನಡೆಯಬೇಕು ಎಂದು ಆಗ್ರಹಿಸಿದರು. ಮಾಜಿ ಸೈನಿಕ ಶಬ್ಬೀರ್ ಪಟೇಲ್ ಮಾತನಾಡಿದರು. ಈ ವೇಳೆ ಈರಣ್ಣಗೌಡ ಬಿರಾದಾರ ಅವರನ್ನು ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಸಂಘಟನಾ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ಶಿವಪ್ಪ ಸುಲ್ಪಿ, ಶಂಕರ ದೊಡಮನಿ, ವ್ಯಾಪಾರಸ್ಥರಾದ ಶರಣಯ್ಯ ಮಠ, ವಿಶ್ವನಾಥ, ವಿದ್ಯಾರ್ಥಿಗಳಾದ ರಾಜುಗೌಡ ಪೊಲೀಸಪಾಟೀಲ, ನಿಂಗಣ್ಣ ಪೂಜಾರಿ, ಎಪಿಎಂಸಿ ಸಿಬ್ಬಂದಿಯಾದ ಸುರೇಶ, ದಯಾನಂದ, ಮೈಹಿಬೂಬ್ ಸೇರಿ ಇತರರು ಉಪಸ್ಥಿತರಿದ್ದರು.