ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಮುಂಗಾರು ಮಳೆಗಾಲದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಂಭವಿಸಬಹುದಾದ ಪ್ರಕೃತಿ ವಿಕೋಪ ಹಾಗೂ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಸರ್ವಸನ್ನದ್ಧವಾಗಿದ್ದು, ಮಳೆಗಾಲದಲ್ಲಿ ಪ್ರಕೃತಿ ವಿಕೋಪ, ಪ್ರವಾಹದಲ್ಲಿ ಜನ-ಜಾನುವಾರ ಹಾನಿಯಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಅಧಿಕಾರಿಗಳು ಮೊದಲಾದ್ಯತೆ ನೀಡುವುದರೊಂದಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ.ಆನಂದ ಕೆ. ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಶುಕ್ರವಾರ ಮುಂಗಾರು ಮಳೆ ಅವಧಿಯ ಪೂರ್ವಸಿದ್ಧತೆ ಕುರಿತ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಿಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತುರ್ತು ಪರಿಸ್ಥಿತಿಯ ನಿರ್ವಹಣೆಗಾಗಿ ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರಸ್ಥಾನದಲ್ಲೇ ಇರಬೇಕು ಎಂದು ಕಟ್ಟುನಿಟ್ಟಾಗಿ ಸೂಚನೆ ನೀಡಿದರು.
ಹೆಲ್ಪ್ ಲೈನ್ ಸ್ಥಾಪಿಸಿ: ತಾಲೂಕಾ ಹಂತದಲ್ಲಿ ಸಂಭವಿಸುವ ಪ್ರಕೃತಿ ವಿಕೋಪ ಸಂದರ್ಭದಲ್ಲಿ ತಹಶೀಲ್ದಾರರು ಸ್ಥಳದಲ್ಲಿರಬೇಕು. ಅತ್ಯಂತ ಜವಾಬ್ದಾರಿಯಿಂದ ಹಾಗೂ ಅಚ್ಚುಕಟ್ಟಾಗಿ ತುರ್ತು ಸಂದರ್ಭದಲ್ಲಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ಪರಿಹರಿಸಬೇಕು ಎಂದರು.
24 ಗಂಟೆ ಹೆಲ್ಪಲೈನ್ ಸ್ಥಾಪಿಸಬೇಕು: ಯಾವುದೇ ಘಟನೆ ಸಂಭವಿಸಿದ ತಕ್ಷಣ ಸ್ಪಂದಿಸಿ, ಸ್ಥಳಕ್ಕೆ ಧಾವಿಸಬೇಕು. ಪ್ರವಾಹ, ಕಲುಷಿತ ನೀರು, ಕೊಠಡಿ ಸ್ಥಳಾಂತರ ಇತ್ಯಾದಿ ಸಂದರ್ಭದಲ್ಲಿ ತಕ್ಷಣ ಸ್ಪಂದಿಸಬೇಕು. ಕಂಟ್ರೊಲ್ ರೂಂ ವ್ಯವಸ್ಥಿತವಾಗಿ ನಿರ್ವಹಿಸಬೇಕು. ಕಂಟ್ರೋಲ್ ರೂಂನಲ್ಲಿದ್ದವರು ಎಲ್ಲ ಇಲಾಖೆಯ ಸಂಪರ್ಕ ಸಂಖ್ಯೆ ಹೊಂದಿರಬೇಕು. ಅವರು ತಕ್ಷಣ ಸಂಬಂಧಿಸಿದವರಿಗೆ ತಿಳಿಸಬೇಕು. ದಿನದ 24 ಗಂಟೆಯು ಎಲ್ಲ ತಾಲೂಕಿನಲ್ಲಿ ಹೆಲ್ಪ್ ಲೈನ್ ಸ್ಥಾಪಿಸಬೇಕು ಎಂದರು.
ಪ್ರವಾಹ ಪರಿಸ್ಥಿತಿ: ಮಳೆಗಾಲ ಆರಂಭವಾಗುತ್ತಿದ್ದAತೆಯೇ ಜಿಲ್ಲೆಯ ಕೃಷ್ಣಾ, ಭೀಮಾ ಮತ್ತು ದೋಣಿ ನದಿಗಳಿಗೆ ಎದುರಾಗಬಹುದಾದ ಪ್ರವಾಹ ಪರಿಸ್ಥಿತಿ ಸಮರ್ಥವಾಗಿ ನಿಭಾಯಿಸಲು ಸನ್ನದ್ಧರಾಗಿ,ನದಿ ಪಾತ್ರದಲ್ಲಿ ನಿರಂತರ ನಿಗಾ ಮತ್ತು ಪ್ರವಾಹ ಮುನ್ನೆಚ್ಚರಿಕೆ ವಹಿಸಬೇಕು. ಜಲಾಶಯಗಳಲ್ಲಿನ ನೀರಿನ ಲಭ್ಯತೆಯ ಮಾಹಿತಿಯನ್ನು ಪ್ರತಿದಿನ ಸಂಗ್ರಹಿಸಿ, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರು, ಪ್ರಕೃತಿ ವಿಕೋಪದಿಂದ ಉಂಟಾಗುವ ಹಾನಿಗೆ ನಿಯಮಾನುಸಾರ ತಕ್ಷಣವೇ ಪರಿಹಾರ ವಿತರಿಸಲು ಕ್ರಮ ವಹಿಸಬೇಕು ಎಂದರು.
ಶಿಥಿಲಾವ್ಯವಸ್ಥೆಯ ಕಟ್ಟಡಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಮನೆ, ಶಾಲೆ, ಅಂಗನವಾಡಿ, ಆಸ್ಪತ್ರೆ, ವಸತಿ ನಿಲಯಗಳು ಸೇರಿದಂತೆ ಇತರೆ ಕಟ್ಟಡಗಳ ಮಾಹಿತಿ ಸಂಗ್ರಹಿಸಬೇಕು. ಜಾನುವಾರುಗಳಿಗೆ ಹಾನಿಯಾದರೆ 48 ಗಂಟೆಯಲ್ಲಿ ಪರಿಹಾರ, ಮನೆಗಳಿಗೆ ಹಾನಿಯಾದರೆ 72 ಗಂಟೆಗಳಲ್ಲಿ ಪರಿಹಾರ ಒದಗಿಸಬೇಕು. ಗ್ರಾಮ ಮಟ್ಟದಲ್ಲಿ ಏನೇ ಸಮಸ್ಯೆಯಿದ್ದರೂ ಪಿಡಿಒ ಕ್ರಮವಹಿಸಬೇಕು ಅನ್ನೋದು ಸೇರಿದಂತೆ ಹಲವು ವಿಚಾರಗಳ ಕುರಿತು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ, ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಯೋಜನಾ ನಿರ್ದೇಶಕ ಬದ್ರುದ್ದಿನ್ ಸೌದಾಗರ್, ಜಿಲ್ಲಾ ಶಸ್ತ್ರಚಿಕಿತ್ಸಕ ಶಿವಾನಂದ ಮಾಸ್ತಿಹೊಳಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವಾನಂದ ಪಾಟೀಲ, ತೋಟಗಾರಿಕಾ ಜಂಟಿ ನಿರ್ದೇಶಕ ರಾಹುಲ್ ಬಾವಿದೊಡ್ಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಣಧಿಕಾರಿ ಡಾ.ಸಂಪತ್ ಗುಣಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಕೆ ಚವ್ಹಾಣ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.



