ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಮಾಡೆಲ್, ನಟಿ ತ್ವಿಷಾ ಶರ್ಮಾ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ವಿಚಾರಣೆ ನಡೆಸಿದ್ದು, ಇದರ ತನಿಖೆಯನ್ನು ಸಿಬಿಐಗೆ ವಹಿಸಲು ಒಪ್ಪಿಗೆ ನೀಡಿದೆ. ಮುಖ್ಯನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೊಯ್ಮಾಲ್ಯ ಬಾಗ್ಚಿ, ವಿಪುಲ್ ಎಂ.ಪಂಚೋಲಿ ಅವರಿದ್ದ ತ್ರಿಸದಸ್ಯಪೀಠ ಇದರ ವಿಚಾರಣೆ ನಡೆಸುತ್ತಿದೆ.
ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಾಲಿಸಿಟರ್ ಜನರಲ್ ನ್ಯಾಯಾಲಕ್ಕೆ ತಿಳಿಸಿದ್ದಾರೆ. ಇನ್ನು ಮಾಧ್ಯಮ ವರದಿಗಾರಿಕೆ ಸಂಬಂಧ ಕಳವಳ ವ್ಯಕ್ತಪಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿದಾರಾಗುವ ಸಾಧ್ಯತೆ ಇರುವವ ಹೇಳಿಕೆಗಳನ್ನು ಪಡೆಯುವುದು, ಪದೆಪದೆ ಪ್ರಸಾರ ಮಾಡುವುದು ಸರಿಯಲ್ಲ. ಸಂತಸ್ತೆಯ ಕುಟುಂಬಸ್ಥರು ಹಾಗೂ ಆರೋಪಿತರ ಕುಟುಂಬಸ್ಥರ ಹೇಳಿಕೆಗಳನ್ನು ನಿರಂತರವಾಗಿ ಪ್ರಸಾರ ಮಾಡಬಾರದು. ಇದು ತನಿಖೆಯ ಮೇಲೆ ಪರಿಣಾಮ ಬೀರುತ್ತೆ ಎಂದು ಎಚ್ಚರಿಕೆ ನೀಡಿದೆ. ವರದಿ ಮಾಡುವಾಗ ಸಂಯಮ ಇರಲಿ ಎಂದು ಹೇಳಿದೆ.
ಇನ್ನು ಬಾದಿತರು, ಆರೋಪಿತರ ಕುಟುಂಬಸ್ಥರು ಸಾರ್ವಜನಿಕ ವೇದಿಕೆಗಳಲ್ಲಿ ಹೇಳಿಕೆ ಕೊಡುವುದಕ್ಕಿಂತ ತನಿಖಾ ಸಂಸ್ಥೆಗಳ ಮುಂದೆ ಹೇಳಿಕೆಗಳನ್ನು ದಾಖಲಿಸಬೇಕು ಎಂದಿದೆ. ಇನ್ನು ಮಧ್ಯಪ್ರದೇಶ ಹೈಕೋರ್ಟ್ ತ್ವರಿತವಾಗಿ 2ನೇ ಮರಣೊತ್ತರ ಪರೀಕ್ಷೆಗೆ ಆದೇಶ ನೀಡಿರುವುದನ್ನು ಸುಪ್ರೀಂ ಕೋರ್ಟ್ ಶ್ಲಾಘಿಸಿದೆ.
ಮೇ 12ರಂದು ಭೋಪಾಲ್ ನ ಕಟಾರಾ ಹಿಲ್ಸ್ ಪ್ರದೇಶದಲ್ಲಿರುವ ಗಂಡನ ಮನೆಯಲ್ಲಿ 32 ವರ್ಷದ ತ್ವಿಷಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅತ್ತೆ, ಮಾವ, ಕುಟುಂಬಸ್ಥರ ವಿರುದ್ಧ ವರದಕ್ಷಿಣೆ ಕಿರುಕುಳ, ಆತ್ಮಹತ್ಯೆಗೆ ಪ್ರಚೋದನೆಯ ಆರೋಪವನ್ನು ಆಕೆಯ ಕುಟುಂಬಸ್ಥರು ಮಾಡಿದ್ದಾರೆ. ತ್ವಿಷಾ ಮಾದಕವಸ್ತು ವ್ಯಸನಿಯಾಗಿದ್ದಳು ಎಂದು ಅತ್ತೆ, ಮಾವ ಆರೋಪಿಸಿದ್ದಾರೆ. ವರದಕ್ಷಿಣೆ ಕಿರುಕುಳದ ಆರೋಪ ಸಂಬಂಧ ಪತಿ, ಅತ್ತೆ, ಮಾವನ ವಿರುದ್ಧ ಎಫ್ಐಆರ್ ದಾಖಲಾಗಿದೆ.



