ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಹೈಕಮಾಂಡ್ ನಾಯಕರನ್ನು ಭೇಟಿಗಾಗಿ ಶುಕ್ರವಾರ ದೆಹಲಿಗೆ ಹೋಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ರಾಜ್ಯ ರಾಜಕೀಯದ ಹಲವಾರು ವಿದ್ಯಮಾನಗಳು ಹಾಗೂ ಸಚಿವ ಸಂಪುಟ ಪುನರ್ ರಚನೆ ವಿಚಾರ ಸಂಬಂಧ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಸಧ್ಯಕ್ಕೆ ಸಂಪುಟ ಪುನರ್ ರಚನೆ ಆಗಲಿ, ವಿಸ್ತರಣೆಯಾಗಲಿ ಇಲ್ಲ. ಸಚಿವ ಸಂಪುಟ ಪುನರ್ ರಚನೆ, ವಿಸ್ತರಣೆ ಬಗ್ಗೆ ಮಾಧ್ಯಮಗಳವೆ ಹೇಳುತ್ತೇವೆ. ಈಗಾಗ್ಲೇ ಸಂಭವನೀಯ ಸಚಿವರ ಪಟ್ಟಿ ಸಹ ಪ್ರಕಟಿಸುತ್ತಿವೆ. ಹೀಗಾಗಿ ಈ ಬಗ್ಗೆ ಮಾಧ್ಯಮದವರೇ ಉತ್ತರಿಸಬೇಕು ಎನ್ನುವ ಮೂಲಕ ಮಾಧ್ಯಮಗಳ ಮೇಲೆಯೇ ಹಾಕಿದರು.
ಡಿಸೆಂಬರ್ 5ರಂದು ಹಾಸನದಲ್ಲಿ ಪಕ್ಷ ಹಾಗೂ ಹಿಂದುಳಿದ ವರ್ಗಗಳ ಒಕ್ಕೂಟದಿಂದ ಸ್ವಾಭಿಮಾನ ಸಮಾವೇಶ ನಡೆಯಲಿದೆ. ಸಮಾವೇಶಕ್ಕೆ ಹೈಕಮಾಂಡ್ ನಾಯಕರನ್ನು ಕೆಪಿಸಿಸಿ ಅಧ್ಯಕ್ಷರು ಆಹ್ವಾನಿಸಿದ್ದಾರೆ. ಸಮಾವೇಶದ ಬಗ್ಗೆ ಅನಾಮಧೇಯ ಪತ್ರವೊಂದು ಹೈಕಮಾಂಡ್ ಗೆ ಬರೆದಿರುವ ಕುರಿತು ಮಾಹಿತಿ ಇಲ್ಲ. ಈ ಬಗ್ಗೆ ನಾನು ಚರ್ಚಿಸಿಯೇ ಇಲ್ಲ ಎಂದು ಹೇಳಿದರು.