ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ವಿಧಾನಸಭೆ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿದೆ. ಅದರಲ್ಲಿ ಶಕ್ತಿ ಯೋಜನೆಯ ಮೂಲಕ ಮಹಿಳೆಯರು ಉಚಿತವಾಗಿ ಬಸ್ ಪ್ರಮಾಣ ಮಾಡುತ್ತಿದ್ದು, ಅದು 500 ಕೋಟಿ ತಲುಪಿದ್ದು ಸಂಭ್ರಮ. ಸರ್ಕಾರದ ಬಳಿ ಹಣ ಇಲ್ಲ ಎಂದು ಟೀಕೆ ಮಾಡುವವರಿಗೆ ಇದು ಉತ್ತರ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಬಸ್ ನಿಲ್ದಾಣದಲ್ಲಿ ಸೋಮವಾರ, ಶಕ್ತಿ ಯೋಜನೆ ಅಡಿಯಲ್ಲಿ ಇದುವರೆಗೂ 500 ಕೋಟಿ ಮಹಿಳೆಯರು ಸದುಪಯೋಗ ಪಡೆದುಕೊಂಡ ಹಿನ್ನಲೆಯಲ್ಲಿ ಸಿಹಿ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಉಚಿತ ಪ್ರಯಾಣಕ್ಕಾಗಿ ವಿಜಯಪುರ ಜಿಲ್ಲೆಯಲ್ಲಿಯೇ 13 ಕೋಟಿಗೂ ಅಧಿಕ ಮಹಿಳೆಯರು ಇದುವರೆಗೂ ಪ್ರಯಾಣ ಮಾಡಿದ್ದಾರೆ. ಇದರ ವಹಿವಾಟ 449 ಕೋಟಿ ರೂಪಾಯಿ ಆಗಿದೆ. ಸಿಂದಗಿ ಘಟಕದಲ್ಲಿ 1,34,77,7765 ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಇದರ ವೆಚ್ಚ 51 ಕೋಟಿ 58 ಲಕ್ಷ ರೂಪಾಯಿ ಆಗಿದೆ. ಗ್ಯಾರೆಂಟಿಗಳಿಗೆ ಹಣವಿಲ್ಲ. ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಅನ್ನೋರಿಗೆ ಇದು ಉತ್ತರ. 2025-26ನೇ ಸಾಲಿನಲ್ಲಿ ಗ್ಯಾರೆಂಟಿಗಳಿಗಾಗಿ 58 ಸಾವಿರದ 600 ಕೋಟಿ ರೂಪಾಯಿಗಳನ್ನು ಮುಖ್ಯಮಂತ್ರಿಗಳು ಮೀಸಲಿಟ್ಟಿದ್ದಾರೆ. ಇದರಲ್ಲಿ ಯಾವುದೇ ಜಾತಿ, ಧರ್ಮ ಇಲ್ಲ. ದಲ್ಲಾಳಿಗಳು ಇಲ್ಲ ಎಂದರು. ಈ ವೇಳೆ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಸಿಹಿ ತಿನಿಸಲಾಯಿತು.
ಈ ವೇಳೆ ಬಸ್ ಡಿಪೋ ಮ್ಯಾನೇಜರ್ ಲಮಾಣಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಶೈಲ ಕವಲಗಿ, ಸದಸ್ಯರಾದ ಸುನಂದಾ ಯಂಪೂರೆ, ಎಸ್.ಬಿ ಖಾನಾಪೂರ, ರಜತ್ ತಾಂಬೆ, ಪರಶುರಾಮ ಗೌಂಡಿ, ಶಿವಾನಂದ ಹಡಪದ, ಮೋಹಸಿನ ಬೀಳಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರ, ಮಹಿಳಾ ಘಟಕದ ತಾಲೂಕಾಧ್ಯಕ್ಷೆ ಜಯಶ್ರೀ ಹದನೂರ, ಕೆಡಿಪಿ ಜಿಲ್ಲಾ ಸದಸ್ಯ ನೂರ್ ಅಹ್ಮದ್, ಯೋಜನಾ ಪ್ರಾಧಿಕಾರದ ಸದಸ್ಯ ಅಂಬರೀಶ ಚೌಗಲೆ, ಕೆಇಬಿ ನಾಮನಿರ್ದೇಶನ ಸದಸ್ಯೆ ಶಶಿಕಲಾ ಅಂಗಡಿ, ಕೆಡಿಪಿ ಸದಸ್ಯೆ ಮಹಾನಂದ ಬಮ್ಮಣ್ಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.