ಪ್ರಜಾಸ್ತ್ರ ಸುದ್ದಿ
ಬೀದರ(Bidara): ಅಕ್ರಮ ಮರಳು ದಂಧೆ ವಿಚಾರವಾಗಿ ಸ್ಥಳಕ್ಕೆ ಹೋದ ಗಣಿ ಇಲಾಖೆ ಅಧಿಕಾರಿಗೆ ಕೆಟ್ಟ ಪದಗಳಲ್ಲಿ ನಿಂದಿಸಿದ ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ ಸಂಗಮೇಶ ಪುತ್ರ ಬಸವೇಶ ವಿರುದ್ಧ ಮಹಿಳಾ ಆಯೋಗ ಕ್ರಮಕ್ಕೆ ಮುಂದಾಗಿದೆ. ಈ ಕುರಿತು ಬೀದರಲ್ಲಿ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಮಾತನಾಡಿದ್ದು, ಯಾವುದೇ ಶಾಸಕನ ಮಗನಾದರೂ ನಮಗೆ ಕೌಂಟ್ ಆಗುವುದಿಲ್ಲ. ಆಯೋಗದಿಂದ ನೋಟಿಸ್ ಕಳಿಸಲಾಗಿದೆ. ಪ್ರಕರಣದ ಕುರಿತು ವರದಿ ನೀಡುವಂತೆ ಶಿವಮೊಗ್ಗ ಎಸ್ಪಿ ಅವರಿಗೆ ಕೇಳಿದ್ದೇವೆ ಎಂದರು.
ಇಲ್ಲಿ ಯಾರೇ ಆಗಿದ್ದರೂ ತಪ್ಪು ತಪ್ಪೇ. ಅಧಿಕಾರಿಯಾಗಿರಲಿ. ಸಾಮಾನ್ಯ ಮಹಿಳೆಯಾಗಿರಲಿ. ಈ ರೀತಿ ನಡೆದುಕೊಳ್ಳಬಾರದು. ಹೀಗಾಗಿ ಆಯೋಗದಿಂದ ಸಮನ್ಸ್ ಕಳಿಸಲಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಗಣಿ ಅಧಿಕಾರಿ ಜ್ಯೋತಿ ಅವರು ಎಸ್ಪಿ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ. ನಂತರ ಡಿವೈಎಸ್ಪಿ ಕಚೇರಿಗೆ ದೂರು ಸಲ್ಲಿಸಿದ್ದಾರೆ. ಆ ದಿನ ದಾಳಿ ಮಾಡಿದ ಸಂದರ್ಭದಲ್ಲಿ ಏನೆಲ್ಲ ಆಗಿದೆಯೋ ಆ ಬಗ್ಗೆ ದೂರಿನಲ್ಲಿ ತಿಳಿಸಿದ್ದೇನೆ ಎಂದಿದ್ದಾರೆ.