ಪ್ರಜಾಸ್ತ್ರ ಸುದ್ದಿ
ಕೊಪ್ಪಳ(Koppala): ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಕೊಪ್ಪಳಕ್ಕೆ ಭೇಟಿ ನೀಡಿದ್ದರು. ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದ ಬಳಿಕ ವಾಪಸ್ ಗಂಗಾವತಿ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದರು. ಹೀಗಾಗಿ ನಗರದಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಈ ವೇಳೆ ಶಾಸಕ ಜನಾರ್ದನ್ ರೆಡ್ಡಿ ಕಾರು ಡಿವೈಡರ್ ಮೇಲೆ ಹತ್ತಿಸಿ ಸಿಎಂ ಕಾರಿನ ಎದುರಿಗೆ ಹೋಗಿದ್ದಾರೆ. ರಾಂಗ್ ರೂಟ್ ನಲ್ಲಿ ಕಾರು ಬರುತ್ತಿರುವುದು ಗಮನಿಸಿದ ಸಿಎಂ ಬೆಂಗಾವಲು ಪಡೆ, ತಮ್ಮ ಕಾರನ್ನು ನಿಲ್ಲಿಸಿ ಜನಾರ್ದನ್ ರೆಡ್ಡಿ ಕಾರು ಹೋದ ಬಳಿಕ ಸಿಎಂ ಅವರನ್ನು ಕರೆದುಕೊಂಡು ಹೋಗಿದ್ದಾರೆ. ಶಾಸಕ ರೆಡ್ಡಿ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಈ ಸಂಬಂಧ ಇದೀಗ ಕೊಪ್ಪಳ ಪೊಲೀಸರು ನೋಟಿಸ್ ನೀಡಿದ್ದಾರೆ.
ಶಾಸಕ ಜನಾರ್ದನ್ ರೆಡ್ಡಿ ಹಾಗೂ ಅವರಿದ್ದ ಕಾರಿನ ಹಿಂದೆ ಬರುತ್ತಿದ್ದ ಇನ್ನೆರಡು ಕಾರುಗಳ ಮಾಲೀಕರಿಗೆ ಐಪಿಸಿ ಸೆಕ್ಷನ್ 281 ಹಾಗೂ 279ರ ಅಡಿಯಲ್ಲಿ ನೋಟಿಸ್ ನೀಡಲಾಗಿದೆ. ಮುಖ್ಯಮಂತ್ರಿಗಳು ಬರುತ್ತಿದ್ದ ವೇಳೆ ಶಿಷ್ಟಾಚಾರ ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಾಸಕ ಜನಾರ್ದನ್ ರೆಡ್ಡಿ ವರ್ತನೆಯನ್ನು ಸಚಿವರಾದ ಶಿವರಾಜ್ ತಂಗಡಗಿ, ಜಮೀರ್ ಅಹ್ಮದ್ ಖಾನ್ ಖಂಡಿಸಿದ್ದಾರೆ.