ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಬಿ.ಆರ್ ಗವಾಯಿಯವರ ಮೇಲೆ ಶೂ ಎಸೆತಕ್ಕೆ ಯತ್ನಿಸಿದ ಘಟನೆ ಖಂಡಿಸಿ ಅಕ್ಟೋಬರ್ 16ರಂದು ವಿಜಯಪುರ ಬಂದ್ ಗೆ ಕರೆ ನೀಡಲಾಗಿದೆ ಎಂದು ಪುರಸಭೆ ಮಾಜಿ ಸದಸ್ಯರಾದ ರಾಜಶೇಖರ ಕೂಚಬಾಳ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ದಲಿತ ಸಂಘಟನೆಗಳ ಒಕ್ಕೂಟ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಒಕ್ಕೂಟ, ರೈತ, ಕಾರ್ಮಿಕ, ವಿದ್ಯಾರ್ಥಿ, ಮಹಿಳಾಪರ, ಬಸವಪರ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಬಂದ್ ನಡೆಸಲಾಗುತ್ತಿದೆ ಎಂದರು.
ಮುಂಜಾನೆ 10 ಗಂಟೆಗೆ ಸಿದ್ದೇಶ್ವರ ದೇವಸ್ಥಾನದಿಂದ ಅಂಬೇಡ್ಕರ್ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಭಾರತದ ಸಂವಿಧಾನ ವಿಶ್ವದಲ್ಲೇ ಉತ್ಕೃಷ್ಟವಾಗಿದೆ. ಅದರಲ್ಲಿನ ನ್ಯಾಯಾಂಗ ವ್ಯವಸ್ಥೆಯ ಪ್ರಮುಖವಾದದ್ದು ಸರ್ವೋಚ್ಛ ನ್ಯಾಯಾಲಯ. ಮುಖ್ಯನ್ಯಾಯಮೂರ್ತಿಗಳನ್ನು ಸಂಬೋಧಿಸಬೇಕಾದರೆ ಮೈಲಾರ್ಡ್ ಎನ್ನುತ್ತಾರೆ. ವಿಚಾರಣೆ ಸಂದರ್ಭದಲ್ಲಿಯೇ ಮನುವಾದ ಮನಸ್ಥಿತಿ ಹೊಂದಿರುವ ವ್ಯಕ್ತಿಯೊಬ್ಬ ಶೋ ಎಸೆತಕ್ಕೆ ಪ್ರಯತ್ನಿಸಿರುವುದು ಅತ್ಯಂತ ಖಂಡನೀಯ. ಈ ಘಟನೆ ಸಂವಿಧಾನ ಮತ್ತು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತದ ಮೇಲೆ ಪ್ರಹಾರ ಅಂತಾ ಆಕ್ರೋಶ ವ್ಯಕ್ತಪಡಿಸಿದರು.
ಈ ಘಟನೆ ನಡೆದು ಸುಮಾರು 9 ಗಂಟೆಯ ತನಕ ಯಾರೊಬ್ಬರೂ ಖಂಡಿಸದೆ ಇರುವುದನ್ನು ಗಮನಿಸಬೇಕು. ಸಂಸದರು, ಸಚಿವರು ಪ್ರತಿಕ್ರಿಯೆ ನೀಡದೆ ಇರುವುದು ಇದಕ್ಕೆ ಕುಮ್ಮಕ್ಕೆ ನೀಡುವ ರೀತಿಯಲ್ಲಿದೆ. ಆರ್ ಎಸ್ಎಸ್ ಸಂಸ್ಕೃತಿಯಲ್ಲಿರುವವರು ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ಪ್ರತಿಕ್ರಿಯೆಗಳನ್ನು ನೋಡಿದರೆ ಅವರ ವ್ಯಕ್ತಿತ್ವಕ್ಕೆ ಚ್ಯುತಿ ತರುವ ರೀತಿಯಲ್ಲಿದೆ ಅನ್ನೋದನ್ನು ನಾವು ಗಮನಿಸಬೇಕು. ಇದೆಲ್ಲವನ್ನು ಖಂಡಿಸಿ ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಎಲ್ಲ ಸಂಘಟನೆಗಳು ವಿಜಯಪುರ ಬಂದ್ ಗೆ ಕರೆ ನೀಡಿದೆ ಅಂತಾ ಹೇಳಿದರು. ರವಿ ಹೋಳಿ, ಧರ್ಮಣ್ಣ ಎಂಟಮಾನ ಮಾತನಾಡಿದರು. ಸಲೀಂ ಮರ್ತೂರ ಉಪಸ್ಥಿತರಿದ್ದರು.