ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ನೀಡಿರುವ ಒಂದು ದೇಶ ಒಂದು ಚುನಾವಣೆ(One Nation One Election) ವರದಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕಿದೆ. ಪ್ರಧಾನಿ ಮೋದಿ ನೇತೃತ್ವದ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಈ ಮೂಲಕ ಲೋಕಸಭೆ ಹಾಗೂ ರಾಜ್ಯ ಚುನಾವಣೆಗಳು ಏಕಕಾಲದಲ್ಲಿ ನಡೆಯುವುದು. ಈ ವರದಿಯನ್ನು ಈ ಬಾರಿಯ ಲೋಕಸಭಾ ಚುನಾವಣೆ ಘೋಷಣೆಗೂ ಮೊದಲೇ ನೀಡಲಾಗಿತ್ತು. ಬಿಜೆಪಿ ನೀಡಿದ ಭರವಸೆಗಳಲ್ಲಿ ಇದು ಒಂದಾಗಿತ್ತು.
ವಿಪಕ್ಷಗಳ ವಿರೋಧ: ಕೇಂದ್ರದ ಒಂದು ದೇಶ ಒಂದು ಚುನಾವಣೆಗೆ ವಿಪಕ್ಷಗಳ ನಾಯಕರು ವಾಗ್ದಾಳಿ ನಡೆಸಿದ್ದಾರೆ. ಇದು ಒಳ್ಳೆಯದಲ್ಲ. ವಾಸ್ತವದಲ್ಲಿ ಇದು ನಡೆಯಲ್ಲ ಎಂದು ಎಐಸಿಸಿ(AICC) ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ. ಕೆಲ ರಾಜ್ಯಗಳ ಚುನಾವಣೆಗಳು ಹತ್ತಿರ ಬಂದಿವೆ. ಇಂತಹ ಸಂದರ್ಭದಲ್ಲಿ ಜನರ ಗಮನ ಬೇರೆ ಸೆಳೆಯುವುದು ಬಿಜೆಪಿ ಪ್ರತಿ ಬಾರಿ ಮಾಡುವ ತಂತ್ರವೆಂದು ಕಿಡಿ ಕಾರಿದ್ದಾರೆ. ಒಂದು ದೇಶ ಒಂದು ಚುನಾವಣೆಯನ್ನು ನಾನು ವಿರೋಧಿಸುತ್ತೇನೆ ಎಂದು ಎಐಎಂಐಎಂ(AIMIM) ನಾಯಕ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದು, ಒಕ್ಕೂಟ ವ್ಯವಸ್ಥೆಯನ್ನು ಒಡೆದು ಹಾಕುವುದು ಇದರ ಹಿಂದಿನ ಕುತಂತ್ರವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರಸಭೆ, ಪುರಸಭೆ, ಸ್ಥಳೀಯ ಚುನಾವಣೆಗಳಲ್ಲಿ ಪ್ರಚಾರ ಮಾಡುವ ಅನಿವಾರ್ಯತೆ ಇರುವ ಮೋದಿ ಹಾಗೂ ಅಮಿತ್ ಶಾ ಅವರಿಗೆ ಇದರ ಅವಶ್ಯಕತೆಯಿದೆ ಎಂದು ವ್ಯಂಗ್ಯವಾಡಿದ್ದಾರೆ.