ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ವಿಧಾನಸಭೆ ಅಧಿವೇಶನದಲ್ಲಿ ಮಂಗಳವಾರ ಅಕ್ರಮ ಮದ್ಯ ಮಾರಾಟದ ವಿಚಾರ ತೀವ್ರ ಚರ್ಚೆ ಆಯಿತು. ಕಾಂಗ್ರೆಸ್ ಶಾಸಕ ಮಹಾಂತೇಶ್ ಕೌಜಲಗಿ ಈ ವಿಚಾರ ಪ್ರಸ್ತಾಪಿಸಿದರು. ಇದನ್ನು ತಡೆಯಲು ಗ್ರಾಮ ಸಭೆಗಳನ್ನು ಮಾಡಲಾಗಿದೆ. ಡಿಸಿ, ಎಸ್ಪಿ ನೇತೃತ್ವದಲ್ಲಿ ಸಮನ್ವಯ ಸಮಿತಿ ರಚಿಸಲಾಗಿದೆ. ಅಕ್ರಮ ಮದ್ಯ ಮಾರಾಟ ತಡೆಯಲು ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ಹೇಳಿದರು. ಇದಕ್ಕೆ ಬಿಜೆಪಿ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಶಾಸಕ ಅರಗ ಜ್ಞಾನೇಂದ್ರ, ಎಲ್ಲ ಅಂಗಡಿಗಳಲ್ಲಿ ಮದ್ಯ ಮಾರಾಟಕ್ಕೆ ಲೈಸನ್ಸ್ ಕೊಡಿ. ಸರ್ಕಾರಕ್ಕೂ ಆದಾಯ ಜಾಸ್ತಿ ಬರುತ್ತೆ. ನಮ್ಮ ಕ್ಷೇತ್ರದ ಎಎಸ್ಸಿ ಕಾಲೋನಿಯಲ್ಲಿ 35 ವರ್ಷದ ಯುವಕರೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದರು.
ಅರಗ ಜ್ಞಾನೇಂದ್ರ ಮಾತಿಗೆ ಕಾಂಗ್ರೆಸ್ ಶಾಸಕ ನಾರಾಯಣಸ್ವಾಮಿ ಗರಂ ಆದರು. ಯಾಕೆ ಬರೀ ಎಎಸ್ಸಿ, ಎಎಸ್ಟಿ ಯುವಕರನೇ ಕುಡಿಯೋದು. ಬೇರೆಯವರು ಕುಡಿಯಲ್ವಾ, ನೀವು ಕುಡಿಯಲ್ವಾ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನೀವು ಹಿಂದೆ ಗೃಹ ಸಚಿವರು ಆಗಿದ್ದವರು. ಎಷ್ಟು ಅಕ್ರಮ ಮದ್ಯದ ಅಂಗಡಿಗಳನ್ನು ಮುಚ್ಚಿಸಿದೀರಿ, ಎಲ್ಲೆಲ್ಲಿ ಸಿಗುತ್ತೆ ಅನ್ನೋದು ತಿಳಿದುಕೊಳ್ಳಲಿ ಎಂದರು. ಅಬಕಾರಿ ಅಧಿಕಾರಿಗಳೆ ಇದಕ್ಕೆ ಬೆಂಬಲ ನೀಡುತ್ತಿದ್ದಾರೆ. ಅವರನ್ನು ಸಸ್ಪೆಂಡ್ ಮಾಡಿ ಎಂದು ಶಾಸಕ ಸಿದ್ದು ಸವದಿ ಹೇಳಿದರು. ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎನ್ನುವುದರ ವರದಿ ತರಿಸಿಕೊಂಡು ಸದನಕ್ಕೆ ತಿಳಿಸಿ ಎಂದು ಸ್ಪೀಕರ್ ಯು.ಟಿ ಖಾದರ್ ಅವರು ಅಬಕಾರಿ ಸಚಿವರಿಗೆ ಹೇಳಿದರು.