ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸಂಸತ್ ನಲ್ಲಿ ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಗೌರವಿಂದ ಮಾತನಾಡಿದ್ದಾರೆ ಎಂದು ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ಕ್ಷಮೆ ಕೇಳಬೇಕು ಹಾಗೂ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿವೆ. ಇನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಬಹಿರಂಗ ಪತ್ರದ ಮೂಲಕ ವಾಗ್ದಾಳಿ ನಡೆಸಿದ್ದರು. ಅದಕ್ಕೆ ವಿಪಕ್ಷ ನಾಯಕ ಆರ್.ಅಶೋಕ್, ಕನಕದಾಸರ ಸಾಲುಗಳ ಮೂಲಕ ತಿರುಗೇಟು ನೀಡಿದ್ದಾರೆ.
ಜಪವ ಮಾಡಿದರೇನು ತಪವ ಮಾಡಿದರೇನು ವಿಪರೀತ ಕಪಟಗುಣ ಕಲುಷವಿದ್ದವರು.. ಎಂಬ ಕನಕದಾಸರ ವಾಣಿಯಂತೆ, ಬಾಯಿ ಚಪಲಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೇಲೆ ತೋರಿಕೆಯ ಪ್ರೀತಿ, ಗೌರವ ಪ್ರದರ್ಶನ ಮಾಡುವ ನಿಮ್ಮ ಮನಸ್ಥಿತಿಯನ್ನು ಬದಿಗಿರಿಸಿ ಸಿಎಂ ಸಿದ್ದರಾಮಯ್ಯನವರೇ. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ, ಅಂಬೇಡ್ಕರ್ ಅಂತ್ಯಸಂಸ್ಕಾರಕ್ಕೆ ಭೂಮಿ ನೀಡಲು ನಿರಾಕರಿಸಿದ, ಅಂಬೇಡ್ಕರ್ ಅವರನ್ನು ಬಿಟ್ಟು ತಮಗೆ ತಾವೇ ಭಾರತ ರತ್ನ ಕೊಟ್ಟುಕೊಂಡ ನೀಚ ಮನಸ್ಥಿತಿ ನಿಮ್ಮ ಕಾಂಗ್ರೆಸ್ ಪಕ್ಷದ್ದು. ಇದೀಗ ಕೇಂದ್ರ ಗೃಹ ಸಚಿವರ ಭಾಷಣವನ್ನು ತಿರುಚಿ ಮತ್ತೊಮ್ಮೆ ಬಾಬಾ ಸಾಹೇಬರನ್ನು ಅವಮಾನಿಸುತ್ತಿದ್ದೀರಿ ಎಂದು ಎಕ್ಸ್ ಖಾತೆಯಲ್ಲಿ ಬರೆದು ವಾಗ್ದಾಳಿ ನಡೆಸಿದ್ದಾರೆ.