ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಸ್ವಾತಂತ್ರ್ಯಕ್ಕೆ ಸುದೀರ್ಘವಾದ 300 ವರ್ಷಗಳ ಹೋರಾಟವಿದೆ. ಏಕೈತೆ ಹಾಗೂ ಸಾಮರಸ್ಯ ಒಳಗೊಂಡಂತೆ ನಡೆದ ಹೋರಾಟದ ಫಲವಾಗಿ ಆಗಸ್ಟ್ 15, 1947ರಲ್ಲಿ ಸ್ವಾತಂತ್ರ್ಯ ಸಿಕ್ಕಿತು. ಇದಕ್ಕಾಗಿ ಲಕ್ಷಾಂತರ ಜನರ ತ್ಯಾಗ, ಬಲಿದಾನವಾಗಿದೆ. ಈ ಸಂದರ್ಭದಲ್ಲಿ ಆ ಮಹಾನ್ ನಾಯಕರನ್ನು ಸ್ಮರಿಸಿಕೊಳ್ಳಬೇಕು. ಹಾಗೇ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದಾಗಿ 78 ವರ್ಷಗಳಿಂದ ದೇಶ ಮುನ್ನಡೆಯುತ್ತಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಸಾಮಾಜಿಕ ನ್ಯಾಯ ಸಿಗಬೇಕು ಎನ್ನುವ ಉದ್ದೇಶದಿಂದ ಮಹತ್ವದ ಸಂವಿಧಾನವನ್ನು ನಮಗೆ ಕೊಟ್ಟಿದ್ದಾರೆ ಎಂದು ಶಾಸಕ ಅಶೋಕ ಮನಗೂಳಿ ಅವರು ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಗುರುವಾರ ನಡೆದ 78ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಭಾಗದ ಶಾಸಕನಾಗಿ ತಾಲೂಕನ್ನು ಅಭಿವೃದ್ಧಿ ಪಡಿಸಬೇಕು ಎನ್ನುವ ನಿಟ್ಟಿನಲ್ಲಿ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇನೆ. ನಾಡಿನ ಪ್ರತಿಯೊಬ್ಬರಿಗೂ ಸರ್ಕಾರದ ಸೌಲಭ್ಯ ಕೊಡುವ ಪ್ರಾಮಾಣಿಕ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ. ಚುನಾವಣೆ ಪೂರ್ವದಲ್ಲಿ ನಡೆದ ಭರವಸೆಯಂತೆ ಗ್ಯಾರೆಂಟಿಗಳನ್ನು ನೀಡುತ್ತಿದೆ. ರಾಜ್ಯವನ್ನು ಸಮೃದ್ಧಿಯತ್ತ ತೆಗೆದುಕೊಂಡು ಹೋಗುವ ಮೂಲಕ ದೇಶದ ನಂಬರ್ ಒನ್ ರಾಜ್ಯ ಮಾಡಲು ನಮ್ಮ ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದರು.
ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ವೇಳೆ ವಿವಿಧ ಕ್ಷೇತ್ರಗಳ ಸಾಧಕರಿಗೆ, ಎಸ್ಎಸ್ಎಲ್ ಸಿ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ತಾಲೂಕಿನ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ, ನಗದು ಬಹುಮಾನ ನೀಡಿ ಗೌರವಿಸಲಾಯಿತು. ಸರ್ಕಾರಿ ಪ್ರೌಢಶಾಲೆ ಸೇರಿದಂತೆ ಖಾಸಗಿ ಶಾಲಾ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು. ಇದರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ನೃತ್ಯ ಎಲ್ಲರನ್ನು ರಂಜಿಸಿತು. ತಾಲೂಕು ಪಂಚಾಯ್ತಿ ಇಒ ರಾಮು ಜಿ.ಅಗ್ನಿ, ಬಿಇಒ ಆರೀಫ್ ಬಿರಾದಾರ, ಸಿಪಿಐ ನಾನಾಗೌಡ ಆರ್.ಪೊಲೀಸ್ ಪಾಟೀಲ, ಪಿಎಸ್ಐ ಆರೀಫ್ ಮುಶಾಪಿರ್, ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಅಶೋಕ ತೆಲ್ಲೂರ ಸೇರಿ ಅನೇಕ ಮುಖಂಡರು, ಸಾರ್ವಜಿಕರು ಉಪಸ್ಥಿತರಿದ್ದರು.