ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಬಸವ ತತ್ವ, ವಚನ ಸಂಸ್ಕೃತಿ ಹಾಗೂ ಶರಣರ ಹೋರಾಟದ ಬಗ್ಗೆ ನಮ್ಮ ಸರ್ಕಾರಕ್ಕೆ ಸಂಪೂರ್ಣ ಬದ್ಧತೆಯಿದೆ. ಲಿಂಗಾಯತ ಸ್ವಾಮೀಜಿಗಳು ಸಲ್ಲಿಸಿರುವ ಬೇಡಿಕೆಗಳಲ್ಲಿ ಸಾಧ್ಯವಿರುವುದನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಹೇಳಿದರು. ಕಾವೇರಿ ನಿವಾಸದಲ್ಲಿ ಲಿಂಗಾಯತ ಸ್ವಾಮೀಜಿಗಳು, ಸಚಿವರು, ಶಾಸಕರ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಿತು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ, ನಾನು ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಬಸವ ಜಯಂತಿ ದಿನವೇ ಪ್ರಮಾಣ ವಚನ ಸ್ವೀಕರಿಸಿದೆ. ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಕಡ್ಡಾಯ ಮಾಡಿದ್ದು ನಮ್ಮ ಸರ್ಕಾರ. ಗೋರುಚ ಅವರ ಅಧ್ಯಕ್ಷತೆಯಲ್ಲಿ ಅನುಭವ ಮಂಟಪ ಪುನರುಜ್ಜೀವನಕ್ಕೆ ಮುಂದಾಗಿದ್ದು ನಾವು. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು ಕಾಂಗ್ರೆಸ್ ಸರ್ಕಾರ. ಬಸವಣ್ಣನವರ ವಿಚಾರ, ಹೋರಾಟ ಜಾತ್ಯಾತೀತ ಸಮಾಜ ನಿರ್ಮಾಣಕ್ಕೆ ಪೂರಕ. ಜಾತಿ ವ್ಯವಸ್ಥೆ ಬಹಳ ಗಟ್ಟಿಯಾಗಿ ಬೇರೂರಿದೆ. ಇದಕ್ಕೆ ಪಟ್ಟಭದ್ರರು ನೀರು, ಗೊಬ್ಬರ ಹಾಕುತ್ತಿದ್ದಾರೆ. ಆದರೆ, ಬಹಿರಂಗವಾಗಿ ಅವರಿಂದ ಬಸವಣ್ಣನವರನ್ನು ವಿರೋಧಿಸಲು ಸಾಧ್ಯವಿಲ್ಲ ಎಂದು ಹೇಳಿದರು.